
ಬಂಟ್ವಾಳ : ಜಮೀನಿನಲ್ಲಿ ಕೆಲಸದವರೊಂದಿಗೆ ಕೃಷಿ ಕೆಲಸದಲ್ಲಿ ನಿರತರಾಗಿದ್ದ ವೇಳೆ ತಂಡವೊಂದು ಅಕ್ರಮ ಪ್ರವೇಶ ಮಾಡಿ ಜೀವ ಬೆದರಿಕೆ ಒಡ್ಡಿರುವುದಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಮಣಿನಾಲ್ಕೂರು ಗ್ರಾಮ ನಿವಾಸಿ ಮಂಜುನಾಥ ಟಿ.ಸಿ. ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಫೆ 15 ರಂದು ಸಂಜೆ ಮಂಜುನಾಥ ಟಿ.ಸಿ.ಯವರು ಸರಪಾಡಿ ಗ್ರಾಮದಲ್ಲಿರುವ ತಮ್ಮ ಜಮೀನಿನಲ್ಲಿ ಕೆಲಸಗಾರರೊಂದಿಗೆ ಕೃಷಿ ಕೆಲಸದಲ್ಲಿ ನಿರತರಾಗಿದ್ದ ವೇಳೆ ನಾಲ್ವರು ಆರೋಪಿಗಳು ಏಕಾಏಕಿ ಅವರ ಜಾಗಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ, ಅವ್ಯಾಚ ಶಬ್ಧಗಳಿಂದ ನಿಂದಿಸಿ, ಬೆದರಿಕೆ ನೀಡಿದ್ದಾರೆ ಎಂದು ಆರೋಪಿಸಿ, ದೂರು ನೀಡಿದ್ದಾರೆ.ಆರೋಪಿಗಳಾದ ಗಿರೀಶ, ರೇಖಾ ಗಿರೀಶ್, ಲೀಲಾವತಿ, ರಕ್ಷಣ್ ಪೂಜಾರಿ ಎಂಬವರು ಏಕಾಏಕಿ ಇವರ ಕೃಷಿ ಭೂಮಿಗೆ ಅಕ್ರಮ ಪ್ರವೇಶ ಮಾಡಿದ್ದು ಬಳಿಕ ಜಾಗದ ಸುತ್ತಲೂ ಅಳವಡಿಸಿದ್ದ 3 ರಿಂದ 4 ಕಂಭಗಳನ್ನು ಕಿತ್ತೆಸೆದು, ನೆಟ್ಟಿದ್ದ ಅಡಿಕೆ ಸಸಿಗಳನ್ನು ಗುಂಡಿಯಿಂದ ಕಿತ್ತಿಸೆದಿದ್ದಾರೆ.
ಮಂಜುನಾಥರವರು ಆರೋಪಿಗಳ ಕೃತ್ಯಕ್ಕೆ ಆಕ್ಷೇಪಿಸಿದ್ದು, ಆರೋಪಿಗಳ ಪೈಕಿ ಗಿರೀಶ್ ತಾನು ತಂದಿದ್ದ ಕತ್ತಿಯನ್ನು ತೋರಿಸಿ ಅವ್ಯಾಚ ಶಬ್ದಗಳಿಂದ ಬೈದಿದ್ದು, ಉಳಿದ ಆರೋಪಿಗಳೂ ಕೂಡಾ ಬೆದರಿಕೆ ಒಡ್ಡಿರುತ್ತಾರೆ ಎಂಬುದಾಗಿ ಅವರು ತಾವು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಅವರು ನೀಡಿರುವ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 341,447,504,506,427 ಜೊತೆಗೆ 34ರಂತೆ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.