
ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ತೋಟಕ್ಕೆ ಲಗ್ಗೆ ಇಟ್ಟಿದ್ದ ಕಾಡಾನೆಯನ್ನು ಗಸ್ತಿಯಲ್ಲಿದ್ದ ಅರಣ್ಯ ಸಿಬಂದಿ ಓಡಿಸಿದ ಘಟನೆ ಫೆ. 1ರ ರಾತ್ರಿ ನಡೆದಿದೆ.

ರಾತ್ರಿ ಹೇರ ಬಳಿಯ ತೋಟದಲ್ಲಿ ಒಂಟಿ ಕಾಡಾನೆ ಇರುವ ಮಾಹಿತಿ ಬಂದು ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆ ಸಿಬಂದಿ, ಸ್ಥಳೀಯರ ಸಹಕಾರದಲ್ಲಿ ಕಾಡಾನೆಯನ್ನು ಕಾರ್ಯಾಚರಣೆ ನಡೆಸಿ ಕಾಡಿಗೆ ಅಟ್ಟಿಸಿದ್ದಾರೆ. ನೂಜಿಬಾಳ್ತಿಲ, ರೆಂಜಿಲಾಡಿ ಗ್ರಾಮದಲ್ಲಿ ನಿರಂತರ ಕಾಡಾನೆ ಸಂಚರಿಸುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.ನೂಜಿಬಾಳ್ತಿಲ, ರೆಂಜಿಲಾಡಿ ಭಾಗದ ಕಾಡಾನೆ ಸಂಚಾರದ ಮಾಹಿತಿಗೆ ಅರಣ್ಯ ಇಲಾಖೆ ವಾಟ್ಸ್‌ಆ್ಯಪ್ ಗ್ರೂಪ್ ಮಾಡಿದ್ದು, ಅದರಲ್ಲಿ ಸ್ಥಳೀಯರು ಕಾಡಾನೆ ಇರುವ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡುತ್ತಾರೆ.
ಜತೆಗೆ ಅರಣ್ಯ ಇಲಾಖೆಯವರು ರಾತ್ರಿ ಗಸ್ತಿನಲ್ಲಿರುವ ಸಿಬಂದಿಯ ಸಂಪರ್ಕ ಸಂಖ್ಯೆ ಹಾಕಿ ಅವರಿಗೆ ಮಾಹಿತಿ ನೀಡಲು ತಿಳಿಸುತ್ತಾರೆ. ಅದರಂತೆ ಸ್ಥಳೀಯರು ಗಸ್ತು ಕರ್ತವ್ಯದಲ್ಲಿರುವ ಸಿಬಂದಿಗೆ ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ಆಗಮಿಸುವ ಇಲಾಖೆಯ ಸಿಬಂದಿ ಕಾಡಾನೆ ಓಡಿಸುವ ಕಾರ್ಯಾಚರಣೆ ನಡೆಸುತ್ತಾರೆ.