
ಸುಳ್ಯ: ಜ.31ರ ಬುಧವಾರ ಅಯ್ಯನಕಟ್ಟೆ ಜಾತ್ರೆ ಮತ್ತು ದೈವಗಳ ನೇಮೋತ್ಸವದ ಬಳಿಕ ಕಳಂಜ ಗ್ರಾಮದ ಅಯ್ಯನಕಟ್ಟೆ ಕಲ್ಲಮಾಡ ಎಂಬಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ.


ಪೊಲೀಸರ ದಾಳಿಯಲ್ಲಿ 40 ಕೋಳಿಗಳು, ಬೈಕ್ ಗಳು ಮತ್ತು 6 ಜನರನ್ನು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ದೊರಕಿದೆ.ಜೂಜಿನ ಕೋಳಿ ಅಂಕವು ಕಾನೂನುಬಾಹಿರ ಅಪರಾಧವಾಗಿದ್ದು, ಕೋಳಿ ಅಂಕವನ್ನು ನಡೆಸುವುದಕ್ಕಾಗಿ ಪೊಲೀಸ್ ಠಾಣೆಗಳಲ್ಲಿ ಅನುಮತಿ ನೀಡಲು ಕಾನೂನಿನಲ್ಲಿ ಯಾವುದೇ ಅವಕಾಶವಿರುವುದಿಲ್ಲ. ಆದ್ದರಿಂದ ಸಾರ್ವಜನಿಕರು ಕೋಳಿ ಅಂಕ ನಡೆಸಲು ಅನುಮತಿಗಾಗಿ ಪೊಲೀಸ್ ಠಾಣೆಗಳಿಗೆ ಮನವಿ ಸಲ್ಲಿಸಬಾರದು.
ಇಂತಹ ಅಕ್ರಮ ಚಟುವಟಿಕೆಗಳನ್ನು ನಡೆಸುವುದು ಕಂಡುಬಂದಲ್ಲಿ, ಅವರುಗಳ ವಿರುದ್ಧ ಸೂಕ್ತ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣಕನ್ನಡ ಎಸ್ಪಿ ರಿಷ್ಯಂತ್ ಆದೇಶ ಹೊರಡಿಸಿದ್ದರು.ಈ ಹಿಂದೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಸಾಂಪ್ರದಾಯಿಕ ಕೋಳಿ ಕಟ್ಟಕ್ಕೆ ಪೊಲೀಸರು ಅನುಮತಿ ಕೇಳುವಂತಿರಬಾರದು ಮತ್ತು ಅಲ್ಲಿಗೆ ಪೊಲೀಸ್ ದಾಳಿ ನಡೆಸುವಂತಿಲ್ಲ ಎಂದು ವಾದಿಸಿದ್ದರು.
ಆ ಬಳಿಕ ಪೊಲೀಸರು ಅಕ್ರಮ ಕೋಳಿ ಅಂಕಗಳ ಅಡ್ಡೆಗೆ ದಾಳಿ ನಡೆಸುವುದಾಗಿ ತಿಳಿಸಿದ್ದರು ಎನ್ನಲಾಗಿದೆ .