ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ಅಡಿಕೆ ಹಳದಿರೋಗದ ಬಗ್ಗೆ  ಪ್ರಶ್ನೆ ಕೇಳಿದ ಶಾಸಕಿ ಭಾಗೀರಥಿ ಮುರುಳ್ಯ.ಶಾಸಕಿ ಪ್ರಶ್ನೆಗೆ ಸರಕಾರದ ಉತ್ತರವೇನು? ಸರಕಾರ‌ ನೀಡಿದ  ಉತ್ತರದ ವಿಸ್ತೃತ ವರದಿ.

ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ಅಡಿಕೆ ಹಳದಿರೋಗದ ಬಗ್ಗೆ ಪ್ರಶ್ನೆ ಕೇಳಿದ ಶಾಸಕಿ ಭಾಗೀರಥಿ ಮುರುಳ್ಯ.ಶಾಸಕಿ ಪ್ರಶ್ನೆಗೆ ಸರಕಾರದ ಉತ್ತರವೇನು? ಸರಕಾರ‌ ನೀಡಿದ ಉತ್ತರದ ವಿಸ್ತೃತ ವರದಿ.

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಸುಳ್ಯ ತಾಲೂಕಿನ ಪ್ರಮುಖ ಸಮಸ್ಯೆಯಾದ ಅಢಿಕೆ ಹಳದಿ ರೋಗದ ಬಗ್ಗೆ ಶಾಸಕಿ ಭಾಗೀರಥಿ ಮುರುಳ್ಯ ಪ್ರಸ್ತಾವನೆ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಶೇ.80 ಕ್ಕಿಂತ ಹೆಚ್ಚಿನ ಜನರು ಗ್ರಾಮೀಣ ಭಾಗದಲ್ಲಿ ನೆಲೆಸಿದ್ದು, ಹೆಚ್ಚಿನ ಜನರು ಕೃಷಿಕರಾಗಿದ್ದು ಅಡಿಕೆ ಕೃಷಿಯು ತಮ್ಮ ಆದಾಯದ ಮೂಲವಾಗಿದೆ. ಕಳೆದ ಸುಮಾರು 30 ವರ್ಷಗಳಿಂದ ಅಡಿಕೆಗೆ ಹಳದಿ ರೋಗ ಹಬ್ಬಿ ಈಗ ರೋಗ ಬಾಧೆ ತೀವ್ರವಾಗಿದ್ದು ಸದರಿ ರೋಗವನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ಯಾವುದೇ ಮಾರ್ಗಗಳಿಲ್ಲದೆ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.

ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸದನದ ಗಮನ‌ ಸೆಳೆದ ಶಾಸಕಿ.ಶಾಸಕಿ ಪ್ರಶ್ನೆಗೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರ ನೀಡಿದ ಉತ್ತರ ಇಲ್ಲಿದೆ ನೋಡಿ.ಕರ್ನಾಟಕ ರಾಜ್ಯದಲ್ಲಿ, 6.14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯನ್ನು ಬೆಳೆಯಲಾಗುತ್ತಿದ್ದು, 9.33 ಲಕ್ಷ ಮೆ.ಟನ್ ಉತ್ಪಾದನೆ ಮಾಡಲಾಗುತ್ತಿದೆ, ಅಡಿಕೆ ಹಳದಿ ಎಲೆ ರೋಗವು ಒಟ್ಟು 12984 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯನ್ನು ಬಾಧಿಸುತ್ತಿದೆ. ಚಿಕ್ಕಮಗಳೂರು-9625 ಹೆಕ್ಟೇರ್, ಕೊಡಗು- 2142 ಹೆಕ್ಟೇರ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕು ಪ್ರದೇಶದಲ್ಲಿ 1217 ಹೆಕ್ಟೇರ್ ಪ್ರದೇಶದಲ್ಲಿ ಹಳದಿ ಎಲೆ ರೋಗವು ಕಂಡುಬಂದಿದೆ.ಅಡಿಕೆ ಹಳದಿ ಎಲೆ ರೋಗಕ್ಕೆ ಮುಖ್ಯವಾದ ಕಾರಣವೇನೆಂದರೆ ತೋಟಗಳಲ್ಲಿ ಸೂಕ್ತ ನಿರ್ವಹಣೆಯ ಕೊರತೆ, ತೋಟಗಳಲ್ಲಿ ಸೂಕ್ತ ನೀರು ಬಸಿ ಕಾಲುವೆಗಳ ವ್ಯವಸ್ಥೆ ಇಲ್ಲದಿರುವುದು, ಮಣ್ಣಿನ ಪೋಷಕಾಂಶಗಳ ಕೊರತೆ ಹಾಗೂ ಫೈಟೋಪ್ಲಾಸ್ಮಾ ಎಂಬ ಸೂಕ್ಷ್ಮ ರೋಗಾಣುವಿನಿಂದ ಈ ರೋಗವು ಕಂಡುಬರುತ್ತದೆ.ಈ ರೋಗ ಬಾಧೆಗೆ ನಿರ್ಧಿಷ್ಟವಾದ ಕಾರಣಗಳನ್ನು ಕಂಡು ಹಿಡಿಯಲು ರೂ.50 ಲಕ್ಷಗಳ ಅನುದಾನ ಒದಗಿಸಿದ್ದು, ಜನವರಿ-2024 ರಿಂದ ಸಂಶೋಧನೆ ಕೈಗೊಳ್ಳಲು ಕ್ರಮವಹಿಸಲಾಗಿದೆ.

ಈ ಮಧ್ಯೆ ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಅಡಿಕೆ ಬೆಳೆಗೆ ಪರ್ಯಾಯವಾಗಿ ಇತರೆ ವಾಣಿಜ್ಯ ಬೆಳೆಗಳನ್ನು ಪ್ರೋತ್ಸಾಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.ಪರ್ಯಾಯ ಬೆಳೆಗಳನ್ನು ಬೆಳೆಸಲು: ತೋಟಗಾರಿಕೆ ಇಲಾಖೆಯ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಅಡಿಕೆ ಹಳದಿ ಎಲೆ ರೋಗ ಬಾಧಿತ ಪ್ರದೇಶಗಳಲ್ಲಿ ಅಡಿಕೆ ಬೆಳೆಯ ಬದಲಾಗಿ ಇತರೆ ವಾಣಿಜ್ಯ ತೋಟಗಾರಿಕೆ ಬೆಳೆಗಳಾದ ಬಾಳೆ, ತೆಂಗು, ಕಾಫಿ, ಕೋಕೋ, ಕಾಳುಮೆಣಸು, ಜಾಯಿ ಕಾಯಿ,ಬೆಣ್ಣೆಹಣ್ಣು ಹಾಗೂ ಇತರೆ ಬೆಳೆಗಳನ್ನು ಬೆಳೆಯಲು ಆಯಾ ಬೆಳೆಗೆ ಅನುಗುಣವಾಗಿ ಶೇ.40ರಷ್ಟು ಪ್ರತಿ ಹೆಕ್ಟೇರ್ ಗೆ ರೂ.11952 ರಿಂದ ರೂ. 123483 ವರೆಗೆ ಸಹಾಯಧನವನ್ನು ಗರಿಷ್ಠ 4 ಹೆಕ್ಟೇರ್ ವರೆಗೆ ನೀಡಲಾಗುತ್ತಿದೆ.ರಾಜ್ಯದಲ್ಲಿ 2022-23 ನೇ ಸಾಲಿನಲ್ಲಿ. 812 ಹೆಕ್ಟೇರ್ ಪ್ರದೇಶದಲ್ಲಿ ಪರ್ಯಾಯ ಬೆಳೆಗಳನ್ನು ಬೆಳೆಯಲು 1328 ರೈತ ಫಲಾನುಭವಿಗಳಿಗೆ ರೂ. 488 ಲಕ್ಷ ಸಹಾಯಧನ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 191 ಹೆಕ್ಟೇರ್ ಪ್ರದೇಶದಲ್ಲಿ ಪರ್ಯಾಯ ಬೆಳೆಗಳನ್ನು ಬೆಳೆಯಲು 228 ರೈತ ಫಲಾನುಭವಿಗಳಿಗೆ ರೂ. 148 ಲಕ್ಷ ಸಹಾಯಧನ ನೀಡಲಾಗಿದೆ.ಪರ್ಯಾಯ ಬೆಳೆಗಳ ನಿರ್ವಹಣೆ: ಆಯಾ ಬೆಳೆಗೆ ಅನುಗುಣವಾಗಿ ನಿರ್ವಹಣೆಯ ಶೇ.50 ರಷ್ಟು ಪ್ರತಿ ಹೆಕ್ಟೇರ್ ಗೆ ರೂ.2509 ರಿಂದ ರೂ. 18017 ವರೆಗೆ ಸಹಾಯಧನವನ್ನು ಗರಿಷ್ಠ 4 ಹೆಕ್ಟೇರ್ ವರೆಗೆ ರಾಜ್ಯ ಸರ್ಕಾರದಿಂದ ನೀಡಲಾಗುತ್ತಿದೆ.ರಾಜ್ಯದಲ್ಲಿ 2023-24 ನೇ ಸಾಲಿನಲ್ಲಿ ಈ ಬಾಬು, 524 ಹೆಕ್ಟೇರ್ ನಿರ್ವಹಣೆಗೆ 460 ಫಲಾನುಭವಿಗಳಿಗೆ ರೂ. 67.81 ಲಕ್ಷ ಸಹಾಯಧನ ನೀಡಲಾಗುತ್ತಿದೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರ್ಯಾಯ ಬೆಳೆಗಳ ನಿರ್ವಹಣೆಗೆ 65 ಹೆಕ್ಟೇ‌ರ್ ಪ್ರದೇಶಕ್ಕೆ 67 ಫಲಾನುಭವಿಗಳಿಗೆ ರೂ. 10.84 ಲಕ್ಷ ಸಹಾಯಧನ ನೀಡಲಾಗುತ್ತಿದೆ.

ಇಲಾಖಾ ವತಿಯಿಂದ ಅಡಿಕೆ ತೋಟಗಳ ಪೋಷಕಾಂಶ ನಿರ್ವಹಣೆ, ಬಸಿ ಕಾಲುವೆಗಳನ್ನು ಮಾಡುವುದು, ಹಸಿರೆಲೆ ಗೊಬ್ಬರದ ಬಳಕೆ ಹಾಗೂ ರಸ ಗೊಬ್ಬರಗಳ ಪೂರೈಕೆಗಳ ಕುರಿತು ವಿಶ್ವವಿದ್ಯಾಲಯದ ತಜ್ಞರು ಹಾಗೂ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ ಕೈಪಿಡಿ, ಕರಪತ್ರಗಳು ಮತ್ತಿತರೆ ಸಮೂಹ ಮಾಧ್ಯಮಗಳ ಮೂಲಕ ಪ್ರಚಾರ ಕೈಗೊಳ್ಳಲಾಗುತ್ತಿದೆ ಹಾಗೂ ತರಬೇತಿ, ಕಾರ್ಯಾಗಾರಗಳ ಮೂಲಕ ರೈತರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಕೃಷಿ ಸಚಿವರು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ರಾಜ್ಯ