ಸತತ 22 ವರ್ಷ ದಸರಾ ಮೆರವಣಿಗೆಯಲ್ಲಿ ಕಂಗೊಳಿಸಿದ್ದ ಕ್ಯಾಪ್ಟನ್ ಅರ್ಜುನ ಇನ್ನಿಲ್ಲ

ಸತತ 22 ವರ್ಷ ದಸರಾ ಮೆರವಣಿಗೆಯಲ್ಲಿ ಕಂಗೊಳಿಸಿದ್ದ ಕ್ಯಾಪ್ಟನ್ ಅರ್ಜುನ ಇನ್ನಿಲ್ಲ

ಜಂಬೂ ಸವಾರಿಯಲ್ಲಿ ಸತತ 22 ವರ್ಷ ಭಾಗಿಯಾಗಿದ್ದ ಕ್ಯಾಪ್ಟನ್ ಅರ್ಜುನ ಇಂದು ಸಾವನ್ನಪ್ಪಿದ್ದಾನೆ. ಕಾಡಾನೆ ಜೊತೆ ಕಾದಾಡುತ್ತಾ ವೀರಮರಣವನ್ನಪ್ಪಿದ್ದಾನೆ.
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಇಂದು ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡುವ ಕಾರ್ಯಾಚರಣೆ ನಡೆದಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ನಾಲ್ಕು ಸಾಕಾನೆಗಳೊಂದಿಗೆ ಕಾಡಾನೆಗಳ ಕಾರ್ಯಾಚರಣೆ ಆರಂಭಿಸಿದ್ದರು. ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ವೇಳೆ ಅರ್ಜುನನ ಮೇಲೆ ಒಂಟಿಸಲಗ ಅಟ್ಯಾಕ್ ಮಾಡಿದೆ. ಒಂಟಿಸಲಗ ದಾಳಿ ಮಾಡುತ್ತಿದ್ದಂತೆ ಉಳಿದ ಮೂರು ಸಾಕಾನೆಗಳು ಓಡಿ ಹೋಗಿವೆ. ಕೊನೆಗೆ ಒಂಟಿಸಲಗದ ಜೊತೆ ಸಾಕಾನೆ ಅರ್ಜುನ ಒಂಟಿಯಾಗಿ ಕಾಳಗಕ್ಕಿಳಿದಿದ್ದ. ಈ ಮದಗಜಗಳ ಕಾಳಗದಲ್ಲಿ ವೀರಾವೇಷದಲ್ಲಿ ಹೋರಾಡಿದ ಅರ್ಜುನ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

1960ರಲ್ಲಿ ಜನಿಸಿದ್ದ ಅರ್ಜುನನಿಗೆ 63 ವರ್ಷ ವಯಸ್ಸಾಗಿತ್ತು. 1968ರಲ್ಲಿ ಕಾಕನಕೋಟೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅರ್ಜುನನ್ನು ಸೆರೆ ಹಿಡಿಯಲಾಗಿತ್ತು. ಮಾವುತರು ಅರ್ಜುನನ್ನು ಚೆನ್ನಾಗಿ ಪಳಗಿಸಿದ ನಂತರ 1990ರಲ್ಲಿ ಅರ್ಜುನನ್ನು ಮೈಸೂರಿನ ದಸರಾ ಉತ್ಸವದ ಶಿಬಿರಕ್ಕೆ ಕರೆತರಲಾಗಿತ್ತು. ಆನೆ ದ್ರೋಣ, ಬಲರಾಮನ ಬಳಿಕ ಅರ್ಜುನ ಚಿನ್ನದ ಅಂಬಾರಿಯನ್ನು ಹೊತ್ತು ದಸರಾ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದ. ಅರ್ಜುನ 6040 ಕೆಜಿ ತೂಕ ಹೊಂದಿದ್ದು, 2.95 ಮೀಟರ್ ಉದ್ದ ಇದ್ದ. ಕ್ಯಾಪ್ಟನ್ ಅರ್ಜುನ ಸತತ 22 ವರ್ಷದಿಂದ ವಿಶ್ವವಿಖ್ಯಾತ ದಸರಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದ

ರಾಜ್ಯ