
ಕಾರವಾರ ನವೆಂಬರ್ 30 : ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿ ಕುಂದಾಪುರಕ್ಕೆ ಬರುತ್ತಿದ್ದ ಚಲನಚಿತ್ರ ನಟ ರಿಷಬ್ ಶೆಟ್ಟಿ ಅವರ ಕಾರನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಮಾಜಾಳಿ ಚೆಕ್‍ಪೋಸ್ಟನಲ್ಲಿ ತಪಾಸಣೆ ನಡೆಸಿದರು.


ಗೋವಾದಲ್ಲಿ ನಡೆದ 54ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡ ಬಳಿಕ ಕುಂದಾಪುರಕ್ಕೆ ಕಾರವಾರ ಮಾರ್ಗವಾಗಿ ರಿಷಬ್ ಪ್ರಯಾಣಿಸಿದ್ದರು. ಮಾಜಾಳಿಯಲ್ಲಿರುವ ರಾಜ್ಯ ತನಿಖಾ ಠಾಣೆ ಬಳಿ ಕಾರನ್ನು ಸಿಬ್ಬಂದಿ ತಪಾಸಣೆಗಾಗಿ ತಡೆದು ನಿಲ್ಲಿಸಿದ್ದರು.
‘ನಿಯಮದಂತೆ ಪ್ರತಿ ವಾಹನವನ್ನು ತಡೆದು ತಪಾಸಣೆ ನಡೆಸಲಾಗುತ್ತಿತ್ತು. ಕಾರಿನಲ್ಲಿದ್ದದ್ದು ರಿಷಬ್ ಎಂದು ಗೊತ್ತಾಗುತ್ತಿದ್ದಂತೆ ಪುಳಕಿತರಾದೆವು. ಅವರನ್ನು ಮಾತನಾಡಿಸಿದೆವು. ಕಾರಿನಿಂದ ಕೆಳಕ್ಕೆ ಇಳಿದು ಬಂದ ಅವರು ಕರ್ತವ್ಯದಲ್ಲಿದ್ದ ಅಬಕಾರಿ, ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜತೆ ಫೋಟೊ ತೆಗೆಸಿಕೊಂಡರು’ ಎಂದು ಸಿಬ್ಬಂದಿಯೊಬ್ಬರು ಸಂತಸದಿಂದ ಹೇಳಿದರು.