
ವಿಸ್ತಾರ ಏರ್ಲೈನ್ಸ್ ಸಂಸ್ಥೆಯಲ್ಲಿ ಉದ್ಯೋಗ ತೆಗೆಸಿಕೊಡುವುದಾಗಿ ನಂಬಿಸಿ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಂದ 13 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಪೀಕಿಸಿರುವ ಘಟನೆ ನಡೆದಿದ್ದು ವಂಚನೆಗೊಳಗಾದ ಮಹಿಳೆ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮದ ನಿವಾಸಿ ಯಶ್ವಿನಿ ಕೆಬಿ ಎಂಬವರು ವಂಚನೆಗೆ ಒಳಗಾದವರು. ಅಪರಿಚಿತ ವ್ಯಕ್ತಿ ಜುಲೈ 15ರಂದು ಫೋನ್ ಮಾಡಿದ್ದು ತನ್ನನ್ನು ವಿಸ್ತಾರ ಏರ್ಲೈನ್ಸ್ ಸಿಂಗಾಪುರ ಬ್ರಾಂಚ್, ದೇವನಹಳ್ಳಿ ಬೆಂಗಳೂರು ಸಂಸ್ಥೆಯಿಂದ ಎಂದು ಪರಿಚಯಿಸಿಕೊಂಡಿದ್ದ. ತಮ್ಮ ಸಂಸ್ಥೆಯಲ್ಲಿ ಉದ್ಯೋಗ ಖಾಲಿಯಿದ್ದು ಹೆಚ್ಚಿನ ಸಂಬಳ ಹಾಗೂ ಇನ್ನಿತರ ಸೌಲಭ್ಯಗಳು ನೀಡುವುದಾಗಿ ತಿಳಿಸಿದ್ದ.
ಆದರೆ ಉದ್ಯೋಗ ತೆಗೆಸಿಕೊಡಲು ಹಣದ ಅಗತ್ಯವಿದೆಯೆಂದು ತಿಳಿಸಿದ್ದು ಪದೇ ಪದೇ ಕರೆ ಮಾಡಿ ಹಣ ಕೇಳಿ ಪಡೆದಿದ್ದಾನೆ. ಒಟ್ಟು ವಿವಿಧ ಹಂತಗಳಲ್ಲಿ 13,00,997 ರೂ. ಗಳನ್ನು ಆನ್ಲೈನ್ ಮೂಲಕ ಪಾವತಿಸಿದ್ದು ಉದ್ಯೋಗ ನೀಡದೇ ಮೋಸ ಮಾಡಿದ್ದಾರೆ ಎಂದು ಮಹಿಳೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಐಪಿಸಿ ಕಲಂ 419, 420 ಮತ್ತು ಐಟಿ ಆಕ್ಟ್ 66 (ಡಿ) ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
