ಬಂಟ್ವಾಳ: ಬಸ್‌ಗೆ ಲಾರಿ ಢಿಕ್ಕಿ ; ಬಸ್‌ನಿಂದ ರಸ್ತೆಗೆ ಎಸೆಯಲ್ಪಟ್ಟ ಮಹಿಳೆ ಗಂಭೀರ

ಬಂಟ್ವಾಳ: ಬಸ್‌ಗೆ ಲಾರಿ ಢಿಕ್ಕಿ ; ಬಸ್‌ನಿಂದ ರಸ್ತೆಗೆ ಎಸೆಯಲ್ಪಟ್ಟ ಮಹಿಳೆ ಗಂಭೀರ

ಬಂಟ್ವಾಳ: ಬಸ್ ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳಾ ಪ್ರಯಾಣಿಕರೊಬ್ಬರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳ ತಾಲೂಕಿನ ಪದು ಗ್ರಾಮದ ಕಡೆಗೋಳಿ ಎಂಬಲ್ಲಿ ನಡೆದಿದೆ.

ರಾಜೀವಿ ಎಂಬವರು ಗಾಯಗೊಂಡ ಮಹಿಳೆಯಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಸಿರೋಡು ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಸರಕಾರಿ ಶಿಶಿಲ ಬಸ್ ಗೆ ಪುದು ಗ್ರಾಮದ ಕಡೆಗೋಳಿ ಎಂಬಲ್ಲಿ ಹಿಂಬದಿಯಿಂದ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬರುತ್ತಿದ್ದ ಲಾರಿಯೊಂದು ಓವರ್ ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ಕೆ.ಎಸ್.ಆರ್.ಟಿ.ಸಿ.ಬಸ್ ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಬಸ್ ಗೆ ಹಾನಿಯಾಗಿದ್ದಲ್ಲದೆ, ಬಸ್ ನೊಳಗೆ ನಿಂತಿದ್ದ ಪ್ರಯಾಣಿಕರ ಪೈಕಿ ರಾಜೀವಿ ಎಂಬವರು ಬಸ್ ನ ಎದುರು ಬದಿಯ ಡೋರ್ ನಿಂದ ಹೊರಕ್ಕೆ ಎಸೆಯಲ್ಪಟ್ಟು ತಲೆಗೆ ಮತ್ತು ಇತರ ಭಾಗಗಳಿಗೆ ಗಂಭೀರವಾಗಿ ಗಾಯವಾಗಿದೆ. ಗಾಯಾಳು ರಾಜೀವಿ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಜ್ಯ