
ಮಂಗಳೂರು: ಕಾರೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ತಣ್ಣೀರುಬಾವಿ ಬೀಚ್ ಬಳಿ ರಾತ್ರಿ ನಡೆದಿದೆ.


ಗಾಯಗೊಂಡವರನ್ನು ಬೆಂಗರೆ ನಿವಾಸಿ ನಝೀರ್ ಎಂಬವರ ಮಗ ಮೊಯ್ದಿನ್ ನಾಝಿಮ್ ಮತ್ತು ಅವರ ಸ್ನೇಹಿತ ಸಾಲೆತ್ತೂರು ನಿವಾಸಿ ಅನಸ್ ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡಿರುವ ಇವರಿಬ್ಬರನ್ನು ನಗರದ ಎರಡು ಪ್ರತ್ಯೇಕ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಮೀಲಾದುನ್ನಬಿ ಪ್ರಯುಕ್ತ ಶನಿವಾರ ಬೆಂಗರೆ ಮಸೀದಿ ವಠಾರದಲ್ಲಿ ಮದ್ರಸ ಮಕ್ಕಳ ಪ್ರತಿಭೋತ್ಸವ ಕಾರ್ಯಕ್ರಮವಿತ್ತು. ಈ ಹಿನ್ನೆಲೆಯಲ್ಲಿ ಸಾಲೆತ್ತೂರು ನಿವಾಸಿ ಅನಸ್ ತನ್ನ ಸ್ನೇಹಿತನಾದ ಬೆಂಗರೆಯ ಮೊಯ್ದಿನ್ ನಾಝಿಮ್ ಅವರ ಮನೆಗೆ ಬಂದು ಬಳಿಕ ಮದ್ರಸ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸಂಜೆ 7:30 ಸುಮಾರಿಗೆ ನಾಝಿಮ್ ಸಾಲೆತ್ತೂರಿಗೆ ತೆರಳುವ ಸ್ನೇಹಿತ ಅನಸ್ ರನ್ನು ತನ್ನ ಬೈಕ್‌ನಲ್ಲಿ ಕುಳ್ಳಿರಿಸಿಕೊಂಡು ಕೂಳೂರು ಬಸ್ ನಿಲ್ದಾಣಕ್ಕೆ ಬರುತ್ತಿದ್ದರು. ಈ ವೇಳೆ ಬೈಕ್ ತಣ್ಣೀರುಬಾವಿ ಬೀಚ್ ಸಮೀಪಿಸುತ್ತಿದ್ದಂತೆ ಹಿಂದಿನಿಂದ ಬಂದ ಕಾರೊಂದು ಬೈಕಿಗೆ ಢಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ತಿಳಿದುಬಂದಿದೆ. ಅಪಘಾತ ನಡೆಸಿ ಪರಾರಿಯಾಗಿರುವ ವಾಹನದ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ