
ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಶಂಭುಗ ಗುಡ್ಡಚಾಮುಂಡಿ ಪಂಜುರ್ಲಿ ಮಲೆಕೊರತಿ ದೈವಸ್ಥಾನದ ವ್ಯಾಪ್ತಿಯ ಸುಳ್ಳಮಲೆ ಬಳ್ಳಾಮಲೆಯಲ್ಲಿ ಇಂದಿನಿoದ ಗುಹಾ ತೀರ್ಥ ಸ್ನಾನ ನಡೆಯಲಿದೆ. ವರ್ಷದಲ್ಲಿ ಈ ಗುಹೆಗೆ ಸಾರ್ವಜನಿಕರಿಗೆ ಐದು ದಿನ ಮಾತ್ರ ಪ್ರವೇಶ. ನೂರಾರು ವರ್ಷಗಳಿಂದ ಇಲ್ಲಿ ತೀರ್ಥಸ್ನಾನ ನಡೆದುಕೊಂಡು ಬಂದಿದೆ. ಈ ಗುಹೆಯಲ್ಲಿರುವ ಪವಿತ್ರ ತೀರ್ಥಸ್ನಾನ ಮಾಡಿದರೆ, ಇಷ್ಟಾರ್ಥ ಸಿದ್ಧಿ ಎಂಬ ನಂಬಿಕೆಯೂ ಇದೆ. ಗುಡ್ಡಪ್ರದೇಶದಲ್ಲಿ ಇರುವ ಈ ಜಾಗ ಸಾರ್ವಜನಿಕರಿಗೆ ತೆರೆದುಕೊಳ್ಳುವುದೇ ಚೌತಿಗೂ ಮುನ್ನ ಬರುವ ಸೋಣ ಅಮಾವಾಸ್ಯೆಯಂದು. ಇದು ಸುಳ್ಳಮಲೆ-ಬಳ್ಳಮಲೆಯ ಗುಹಾತೀರ್ಥದ ವೈಶಿಷ್ಟ್ಯ. ಇಂದಿನಿoದ ಈ ವರ್ಷದ ತೀರ್ಥಸ್ನಾನ ವಿಧಿ ವಿಧಾನಗಳು ಆರಂಭಗೊoಡಿದೆ.



ಸುಳ್ಳಾಮಲೆ ಗುಹಾ ತೀರ್ಥ ಸ್ಥಳ ಎಲ್ಲಿದೆ..?
ಮಂಗಳೂರು- ಮಾಣಿ ರಾಷ್ಟಿಯ ಹೆದ್ದಾರಿ ನಡುವೆ ದಾಸಕೋಡಿ ಬಸ್ ನಿಲ್ದಾಣದಿಂದ ಸುಮಾರು ಮೂರೂವರೆ ಕಿ. ಮೀ. ದೂರದಲ್ಲಿ ಅನಂತಾಡಿಗೆ ಸಮೀಪದ ಸುಳ್ಳಮಲೆ- ಬಳ್ಳಮಲೆ ಅರಣ್ಯ ಪ್ರದೇಶದಲ್ಲಿ ಈ ಸುಳ್ಳಮಲೆ ಗುಹೆ ಇದೆ. ಆದರೆ ಇಲ್ಲಿಗೆ ಹೋಗಲು ವಾಹನ ವ್ಯವಸ್ಥೆ ಇಲ್ಲದಿರುವುದರಿಂದ ವಾಹನ ವ್ಯವಸ್ಥೆ ಮಾಡಿಕೊಂಡು ಎರಡು ಕಿ.ಮೀ ಸಾಗಿದ ಬಳಿಕ ನಡೆದು ಗುಹೆಯ ಕಡೆ ಹೋಗಬೇಕಾಗುತ್ತದೆ. ಅರಣ್ಯ ಹಾದಿಯಲ್ಲಿ ಹೋಗಿ ಹತ್ತು ಮೀಟರ್ ಎತ್ತರದ ಬಿದಿರಿನ ಏಣಿಯಲ್ಲಿ ಇಳಿದು ಹತ್ತು ಮೀಟರ್ ಸಾಗಿದರೆ ಗುಹೆ ಸಿಗುತ್ತದೆ. ಇಲ್ಲಿ ಸ್ಥೂಲಕಾಯದವರೂ ಸಪೂರ ಶರೀರದವರೂ ಸಾಗಬಹುದಾದಂತಹ ಎರಡು ಬಂಡೆಗಳು ಇವೆ. ಬಂಡೆಗಳ ಮೇಲೆ ಹರಿದು ಬರುವ ನೀರೇ ತೀರ್ಥ. ಈ ನೀರಿನ ಮೂಲ ಯಾವುದು ಎಂಬುದು ಇಂದಿಗೂ ಯಾರಿಗೂ ತಿಳಿದಿಲ್ಲ.

ಇನ್ನು ಪಂಚ ಪಾಂಡವರು ಇಲ್ಲಿ ನೆಲೆಸಿದ್ದರು ಎಂಬ ಐತಿಹ್ಯವಿದೆ. ಈ ಗುಹಾಲಯವಿರುವ ಪ್ರದೇಶಕ್ಕೆ ವರ್ಷದಲ್ಲಿ ಐದು ದಿನ ಮಾತ್ರ ಪ್ರವೇಶ. ಪಾಂಡವರು ತಮ್ಮ ಅಜ್ಞಾತವಾಸದ ಸಮಯದಲ್ಲಿ ಇಲ್ಲಿ ಕೆಲಕಾಲ ನೆಲೆಸಿದ್ದರು ಎಂಬ ನಂಬಿಕೆ ಇಲ್ಲಿನವರಿಗಿದೆ. ನೂರಾರು ವರ್ಷಗಳಿಂದ ತೀರ್ಥ ಸ್ನಾನ ನಡೆಯುತ್ತಾ ಬಂದಿದೆ. ಅಷ್ಟೇ ಅಲ್ಲ ಶ್ರಾವಣ ಅಮಾವಾಸ್ಯೆಯಿಂದ ಭಾದ್ರಪದ ಚೌತಿಯವರೆಗಿನ ಸಮಯದಲ್ಲಿ ಇಲ್ಲಿ ತೀರ್ಥಸ್ನಾನ ಮಾಡಿದರೆ ಜೀವನ ಪಾವನವಾಗುತ್ತದೆ ಎನ್ನುವ ನಂಬಿಕೆ ಇದೆ. ಈ ತೀರ್ಥ ಸ್ನಾನ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಚರ್ಮರೋಗಗಳು ನಿವಾರಣೆಯಾಗುತ್ತವೆ ಎನ್ನಲಾಗುತ್ತದೆ.

