
ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ಮಂಗಳೂರಿನಲ್ಲಿರುವ ರಾಜ್ಯದ ಏಕೈಕ ಮೀನುಗಾರಿಕಾ ಕಾಲೇಜಿನ ಪ್ರೊ. ಆಗಿರುವ ಡಾ. ಎ.ಟಿ. ರಾಮಚಂದ್ರ ನಾಯ್ಕ ರವರಿಗೆ ವಿಶ್ವವಿದ್ಯಾಲಯದ ಶಿಕ್ಷಕರ ಸಂಘವು ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ. ಸೆಪ್ಟಂಬರ್ 5 ನೇ ಮಂಗಳವಾರ ವಿಶ್ವವಿದ್ಯಾಲಯದ ಮತ್ತೊಂದು ಸಂಸ್ಥೆಯಾದ ಗದಗ ಜಿಲ್ಲೆಯ ಪಶುವೈದ್ಯಕೀಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯ ಸಂದರ್ಭದಂದು ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಡಾ. ಎ.ಟಿ. ರಾಮಚಂದ್ರ ನಾಯ್ಕ ರವರು ಮೀನುಗಾರಿಕಾ ಕಾಲೇಜಿನ ಜಲ ಪರಿಸರ ನಿರ್ವಹಣೆ ವಿಭಾಗದಲ್ಲಿ ಪ್ರೊಪೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಇವರು ದೆಹಲಿಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಪರಿಷತ್‍ನ ಪ್ರಾಯೋಜಿತ ಯೋಜನೆಯನ್ನು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ ಹಾಗೂ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಗಳಲ್ಲಿ ಅನುಷ್ಟಾನಗೊಳಿಸಿದ್ದರು. ಬೆಂಗಳೂರಿನ ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿಯಲ್ಲಿ ಸಂಪರ್ಕಾಧಿಕಾರಿಯಾಗಿ, ಉಡುಪಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನಿ, ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾಗಿ ಸೇವೆಸಲ್ಲಿರುತ್ತಾರೆ.
ಡಾ. ಎ.ಟಿ. ರಾಮಚಂದ್ರ ನಾಯ್ಕ ರವರು ಪ್ರಸ್ತುತವಾಗಿ ಮೀನುಗಾರಿಕೆ ವಿಜ್ಞಾನದಲ್ಲಿ ನಾಲ್ಕು ವರ್ಷದ ಸ್ನಾತಕ ಪದವಿ, ಎರಡು ವರ್ಷದ ಸ್ನಾಕೋತ್ತರ ಪದವಿ ಹಾಗೂ ಮೂರು ವರ್ಷಗಳ ಡಾಕ್ಟರೇಟ್ ಪದವಿ ವಿದ್ಯಾರ್ಥಿಗಳಿಗೆ ಭೋದನೆಯ ಮಾಡುತ್ತಿರುವರು. ಸುಮಾರು 10 ಸ್ನಾತಕೋತ್ತರ ಮತ್ತು 5 ಡಾಕ್ಟರೇಟ್ ಪದವಿ ವಿದ್ಯಾರ್ಥಿಗಳಿಗೆ ಸಂಶೋಧನಾ ಸಲಹೆಗಾರರಾಗಿ ಪದವಿ ಪ್ರಧಾನಮಾಡಿಸಿರುತ್ತಾರೆ.
ಪೂರಕವಾಗಿ ಇವರು ವಿವಿಧ ಸಂಸ್ಥೆಗಳ ಪ್ರಾಯೋಜಿತ ಸಂಶೋಧನಾ ಮತ್ತು ವಿಸ್ತರಣಾ ಯೋಜನೆಗಳನ್ನು ಆಯೋಜನೆ ಮಾಡಿರುತ್ತಾರೆ. ಇವುಗಳಲ್ಲಿ ಮುಖ್ಯವಾದವುಗಳು ನಗರಾಭಿವೃದ್ದಿ ಮತ್ತು ಬಡತನ ನಿರ್ಮೂಲನೆ ಸಚಿವಾಲಯದ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನ ‘ಮೀನುಗಾರಿಕೆಯಲ್ಲಿ ಕೌಶಲ್ಯಾಭಿವೃದ್ಧಿ’, ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರದ ‘ಸಂಭಾವ್ಯ ಮೀನುಗಾರಿಕೆ ವಲಯ ಸಲಹೆಗಳು’, ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ ಲಿಮಿಟೆಡ್‍ನ ‘ಸಮುದ್ರ ನೀರಿನ ಗುಣಮಟ್ಟ ಸಮಿಕ್ಷೆ’ ಇತ್ಯಾದಿಗಳು.


ಡಾ. ಎ.ಟಿ. ರಾಮಚಂದ್ರ ನಾಯ್ಕ ರವರು ಇದುವರೆವಿಗೆ ಸುಮಾರು 75 ಸಂಶೋಧನಾ ಪ್ರಬಂಧಗಳನ್ನು ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಸಂಗ್ರಹ ಖಾತೆಗಳಲ್ಲಿ ಪ್ರಕಟಿಸಿರುತ್ತಾರೆ. 100 ಹೆಸರುವಾಸಿ ಲೇಖನಗಳನ್ನು ಕೇಂದ್ರ ಮತ್ತು ರಾಜ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತವೆ. 150 ಜನಪ್ರಿಯ ಲೇಖನಗಳು ರೈತರಿಗೆ, ಕೈಗಾರೋದ್ದಮಿಗಳಿಗೆ, ಮೀನುಗಾರ ಬಾಂಧವರಿಗೆ ಹಾಗೂ ವಿಸ್ತರಣಾ ಕಾರ್ಯನಿರ್ವಾಹಕರಿಗೆ ಲಾಭವಾಗುವ ದೃಷ್ಟಿಯಿಂದ ಸ್ಥಳೀಯ ಭಾಷೆಗಳಲ್ಲಿ ಬಿತ್ತರವಾಗಿವೆ.
2022 ರಲ್ಲಿ ಚನ್ನೈನಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕೀರಣದಲ್ಲಿ ಅತ್ಯುತ್ತಮ ಪೋಸ್ಟರ್ ಪ್ರಶಸ್ತಿಯನ್ನು ಪಡೆದಿರುತ್ತಾರೆ.
ದೇಶದಲ್ಲೇ ಪ್ರಥಮವಾಗಿ ಮೀನುಗಾರಿಕೆ ಕ್ಷೇತ್ರದಲ್ಲಿ ತಯಾರಿಸಲ್ಪಟ್ಟ ‘ಇ-ಲರ್ನಿಂಗ್’ ಗೆ ಸಂಭಂದಿಸಿದಂತೆ 2010 ರಲ್ಲಿ ಅಮೇರಿಕಾದ ಮಿಶಿಗಾನ್ ರಾಜ್ಯದಲ್ಲಿ ಉನ್ನತ ತರಬೇತಿಯನ್ನು ಪಡೆದಿರುತ್ತಾರೆ. ನಂತರ 2017 ರಲ್ಲಿ ಜಪಾನಿನ ಹಿಂದಿನ ರಾಜಧಾನಿಯಾದ ಓಸಾಕ ನಗರದಲ್ಲಿ 6 ನೇ ಜಾಗತಿಕ ಬೌದ್ಧ ಶೃಂಗಸಭೆಯಲ್ಲಿ ಜಲಕೃಷಿ ಮತ್ತು ಮೀನುಗಾರಿಕೆಗೆ ಸಂಭಂದಿಸಿದಂತೆ ಪ್ರಬಂಧವನ್ನು ಮಂಡಿಸಿರುತ್ತಾರೆ.
ಇದುವರೆವಿಗೂ ಇವರು 4 ಪ್ರಾಯೋಜಿತ ಯೋಜನೆಗಳಿಗೆ ಪ್ರಧಾನ ಸಂಶೋಧಕರಾಗಿ ಮತ್ತು 6 ಯೋಜನೆಗಳಿಗೆ ಸಹ-ಪ್ರಧಾನ ಸಂಶೋಧಕರಾಗಿ ಸಾಧನೆ ಮಾಡಿರುತ್ತಾರೆ.
ವಿಶ್ವವಿದ್ಯಾಲಯ ಮತ್ತು ಕಾಲೇಜು ಮಟ್ಟದಲ್ಲಿ ವಿವಿಧ ಸಾಂಸ್ಥಿಕ ಸೇವೆಗಳಾದ ಸಹಾಯಕ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕರು, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರ ನಿಲಯ ಪಾಲಕರು, ಮಾನವ ಹಕ್ಕುಗಳ ಕ್ಲಬ್‍ನ ಸದಸ್ಯ ಕಾರ್ಯದರ್ಶಿ, ತಂಬಾಕು ನಿಯಂತ್ರಣಾಧಿಕಾರಿ, ಎಸ್ಸಿಎಸ್ಪಿ-ಟಿಎಸ್ಪಿ ಸಂಯೋಜಕರು, ಉದ್ಯೋಗ ನೇಮಕಾಧಿಕಾರಿ, ಬಾಹ್ಯ ಪರೀಕ್ಷಾ ಸಂಯೋಜಕರು, ಸಮರ್ತ್ ಇ-ಗವರ್ನೆಂಸ್ ಸ್ಯೂಟ್‍ನ ಮಾಡ್ಯೂಲ್ ನಿರ್ವಾಹಕರು, ಶಿಕ್ಷಕರ ಸಂಘದ ಕಾರ್ಯದರ್ಶಿ, ಮೀನುಗಾರಿಕಾ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಇತ್ಯಾದಿಗಳಾಗಿ ಸೇವೆಸಲ್ಲಿಸಿರುತ್ತಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಾಯೋಜಿತ ಅನೇಕ ತರಬೇತಿ ಕಾರ್ಯಕ್ರಮಗಳನ್ನು ಕಾಲೇಜು, ಗ್ರಾಮೀಣ, ಪಂಚಾಯಿತಿ ಹಾಗೂ ಸ್ಥಳೀಯ ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ಆಯೋಜಿಸಿರುತ್ತಾರೆ.
ಈ ಮೇಲೆ ತಿಳಿಸಿದ ಇವರ ಸುದೀರ್ಗ ಸಾಧನೆಗಳನ್ನು ಗುರುತಿಸಿ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಕರ ಸಂಘವು ಡಾ. ಎ.ಟಿ. ರಾಮಚಂದ್ರ ನಾಯ್ಕ ರವರಿಗೆ ಶ್ರೇಷ್ಟ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಈ ಸಂದರ್ಭದಲ್ಲಿ ಇವರಿಗೆ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ವಿಶ್ವವಿದ್ಯಾಲಯದ ಅಧಿಕಾರಿಗಳು ಅಭಿನಂದನೆಗಳನ್ನು ತಿಳಿಸಿರುತ್ತಾರೆ.