
ಮಂಗಳೂರು: ಮಧ್ಯಾಹ್ನದ ಊಟದ ವೇಳೆ ಬಟ್ಟೆಗೆ
ಸಾಂಬಾರು ಚೆಲ್ಲಿದ ಎಂಬ ಕ್ಷುಲ್ಲಕ ಕಾರಣಕ್ಕೆ ಒಂಬತ್ತನೇ
ತರಗತಿಯ ವಿದ್ಯಾರ್ಥಿಗಳಿಬ್ಬರ ನಡುವೆ ಗಲಾಟೆ
ಶುರುವಾಗಿ ವಿದ್ಯಾರ್ಥಿಯೋರ್ವನ ಎದೆಗೆ ಮತ್ತೋರ್ವ
ವಿದ್ಯಾರ್ಥಿ ಚಾಕು ಎಸೆದು ಕ್ರೌರ್ಯ ಮೆರೆದ ಘಟನೆ
ನರಿಂಗಾನ ಗ್ರಾಮದ ಮೊಂಟೆಪದವು ಶಾಲೆಯಲ್ಲಿ
ನಡೆದಿದೆ ಬಿಸಿಯೂಟದ ಸಂದರ್ಭ ವಿದ್ಯಾರ್ಥಿಯ ತಟ್ಟೆಯಿಂದ ಮತ್ತೋರ್ವ ವಿದ್ಯಾರ್ಥಿಯ ಬಟ್ಟೆಗೆ ಸಾಂಬಾರು ಚೆಲ್ಲಿ ಕಲೆ ಆಯಿತೆಂದು ಕೆರಳಿದ ವಿದ್ಯಾರ್ಥಿ ಸಾಂಬಾರು ಚೆಲ್ಲಿದ ವಿದ್ಯಾರ್ಥಿಗೆ ಕಪಾಳ ಮೋಕ್ಷ ಮಾಡಿದ್ದಲ್ಲದೆ ಆತನ ನೋಟ್ ಪುಸ್ತಕವನ್ನ ಸಾಂಬಾರಿಗೆ ಹಾಕಿ ಅಲ್ಲಿಂದ ಮುಂದೆ ಹೋಗಿದ್ದಾನೆ. ಏಟು ತಿಂದ ವಿದ್ಯಾರ್ಥಿ ಬ್ಯಾಗ್ ನಿಂದ ಹರಿತ ಚೂರಿ ತೆಗೆದು ಹಲ್ಲೆಗೈದವನ ಮೇಲೆ ನೇರವಾಗಿ ಎಸೆದಿದ್ದಾನೆ.

ಅದೃಷ್ಟವಶಾತ್ ಬಲ ಎದೆ ಭಾಗದ ಪಕ್ಕಕ್ಕೆ ಚೂರಿ
ಚುಚ್ಚಿದ್ದು ಗಾಯಗೊಂಡ ವಿದ್ಯಾರ್ಥಿಯನ್ನು ತಕ್ಷಣ
ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿಲಾಗಿದ್ದು, ವಿದ್ಯಾರ್ಥಿ
ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಘಟನೆಯ ಮಾಹಿತಿ ಪಡೆದ ಮಂಗಳೂರು ದಕ್ಷಿಣ ಉಪ
ವಿಭಾಗ ಎಸಿಪಿ ಧನ್ಯ ನಾಯಕ್, ಕೊಣಾಜೆ ಪೊಲೀಸ್
ಠಾಣಾ ಇನ್ಸ್ ಪೆಕ್ಟರ್ ಪ್ರಕಾಶ್ ದೇವಾಡಿಗ ಸೇರಿದಂತೆ
ಅಧಿಕಾರಿಗಳು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಶಾಲೆಗೆ
ಭೇಟಿ ನೀಡಿದ್ದಾರೆ. ಘಟನೆಯ ಕುರಿತಂತೆ ಮಕ್ಕಳ
ನ್ಯಾಯಾಲಯಕ್ಕೆ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ.
ಘಟನೆಯ ದೃಶ್ಯಾವಳಿ ಶಾಲಾ ತರಗತಿ ಕೊಠಡಿಯ
ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಇಂದು ಕೂಡಾ
ಘಟನಾ ಸ್ಥಳಕ್ಕೆ ಎಸಿಪಿ ಧನ್ಯಾ ನಾಯಕ್ ಭೇಟಿ ನೀಡಿ
ಪರಿಶೀಲನೆ ನಡೆಸಲಿದ್ದಾರೆ.
ಸಂಘರ್ಷಕ್ಕೊಳಗಾದ ಇಬ್ಬರು ವಿದ್ಯಾರ್ಥಿಗಳು ಅಲ್ಪ
ಸಂಖ್ಯಾತ ಸಮುದಾಯದವರಾಗಿದ್ದು, ಕ್ಷುಲ್ಲಕ ಕಾರಣಕ್ಕೆ
ಒಂಬತ್ತನೇ ತರಗತಿ ವಿದ್ಯಾರ್ಥಿ ಚಾಕುವಿನಿಂದ
ಸಹಪಾಠಿಯ ಮೇಲೆ ದಾಳಿ ನಡೆಸಿದ್ದು ಆಘಾತಕಾರಿ
ವಿಚಾರವಾಗಿದೆ. ಬಾಲಕನ ಬ್ಯಾಗಲ್ಲಿ ಚಾಕು ಹೇಗೆ
ಬಂತು..? ವಿದ್ಯಾರ್ಥಿಗಳ ನಡುವೆ ದ್ವೇಷ ಇತ್ತೇ
ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ
ಎಂದು ವರದಿ ತಿಳಿಸಿದೆ.
