
ಸುಳ್ಯ ನಗರದ ಕಾಯರ್ತೋಡಿ ವಿಷ್ಣು ನಗರ ಸೂರ್ತಿಲದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ರಕ್ತೇಶ್ವರಿ ಮತ್ತು ಗುಳಿಗ ಮತ್ತು ನಾಗದೇವರ ಕ್ಷೇತ್ರದಲ್ಲಿ ಮೇ.21ಮತ್ತು 22ರಂದು ಪ್ರತಿಷ್ಠಾ ಬ್ರಹ್ಮ ಕಲಶ ಮತ್ತು ನೇಮೋತ್ಸವ ವಿವಿಧ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಲೀಲಾಧರ್ ಡಿ.ವಿ ತಿಳಿಸಿದ್ದಾರೆ ಅವರು ಮೇ.11 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾರ್ಯಕ್ರಮದ ವಿವರ ನೀಡಿದರು.


ಮೇ.18ರಂದು ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಆರಂಭವಾಗಲಿದ್ದು, ಅದೇದಿನ ಸುದರ್ಶನ ಹೋಮ, ಅನ್ನಸಂತರ್ಪಣೆ ನಡೆಯಲಿದೆ. ಮೇ.21ರಂದು ಬೆಳಿಗ್ಗೆ 9.30ಕ್ಕೆ ಸುಳ್ಯ ಚೆನ್ನಕೇಶವ ದೇವಸ್ಥಾನದ ವಠಾರದಿಂದ ಹಸಿರುವಾಣಿ ಮೆರವಣಿಗೆ ನಡೆಯಲಿದ್ದು ಈ ಹಸಿರು ವಾಣಿ ಮೆರವಣಿಗೆಯಲ್ಲಿ ಊರ ಭಕ್ತಾದಿಗಳು, ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿಕೊಂಡರು, ಅದೇ ದಿನ ಸಂಜೆ ಭಜನಾ ಕಾರ್ಯಕ್ರಮ, ತಂತ್ರಿಗಳ ಆಗಮನವಾಗಿ ವಿವಿಧ ವೈದಿಕ ಕಾರ್ಯಕ್ರಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಮೇ.22ರಂದು ಬೆಳಿಗ್ಗೆ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ ನಡೆಯಲಿದ್ದು, 7.44ರ ಮಿಥುನ ಲಗ್ನದ ಸುಮೂರ್ತದಲ್ಲಿ ಪ್ರತಿಷ್ಠೆ,ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ನಿತ್ಯ ನೈಮಿತ್ಯಾಧಿಗಳ ನಿರ್ಣಯ, ಪ್ರಸಾದ ವಿತರಣೆ , ಅನ್ನಸಂತರ್ಪಣೆ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ವೇದಮೂರ್ತಿ ಕುಂಟಾರು ರವೀಶ ತಂತ್ರಿಗಳು ಆಶೀರ್ವಚನ ನೀಡಲಿದ್ದಾರೆ. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಲೀಲಾಧರ್ ಡಿ.ವಿ. ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗುಜರಾತ್ ನ ಉದ್ಯಮಿ ಡಾl ಆರ್.ಕೆ.ನಾಯರ್, ನ.ಪಂ.ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಯೋಜನಾಧಿಕಾರಿ ನಾಗೇಶ್, ನ.ಪಂ.ಸದಸ್ಯೆ ಪ್ರಮಿತಾ ಪ್ರಶಾಂತ್ ಭಾಗವಹಿಸಲಿದ್ದಾರೆ.ಅಂದು ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಗಳೂರಿನ ಬಲೇ ಚಾ ಪರ್ಕ ಕಲಾವಿದರಿಂದ ತುಳು ಹಾಸ್ಯಮಯ ನಾಟಕ ನಡೆಯಲಿದೆ. ಬಳಿಕ ಅನ್ನಸಂತರ್ಪಣೆಯಾಗಿ ಶ್ರೀ ರಕ್ತೇಶ್ವರಿ ಹಾಗೂ ಗುಳಿಗ ದೈವದ ನೇಮೋತ್ಸವ ನಡೆಯಲಿದೆ ಎಂದು ಅವರು ಹೇಳಿದರು.

ಪ್ರಷ್ನಾ ಚಿಂತನೆಯಲ್ಲಿ ಕಂಡು ಬಂದಂತೆ ರಕ್ತೇಶ್ವರಿ, ಗುಳಿಗ ಮತ್ತು ನಾಗದೇವರ ಸಾನಿಧ್ಯಗೊಳಿಸಲಾಗಿದೆ: ನಾರಾಯಣ ಕೇಕಡ್ಕ.
ಸ್ಥಳೀಯವಾಗಿ ಯಾರೇ ಪ್ರಶ್ನಾ ಚಿಂತನೆ ತೊಡಗಿದರೆ ಈ ಸಾನಿಧ್ಯ ಅಭಿವೃದ್ದಿ ಗೊಳಿಸುವಂತೆ ಕಂಡುಬರುತ್ತಿತ್ತು.ಹಾಗಾಗಿ ಸೂರ್ತಿಲದಲ್ಲಿ ರಕ್ತೇಶ್ವರಿ, ಗುಳಿಗ ಮತ್ತು ನಾಗದೇವರ ಸಾನಿಧ್ಯ ಜೀರ್ಣಗೊಳಿಸುವ ಕಾರ್ಯಕ್ಕೆ ಕೈ ಹಾಕಿದೆವು ಹಲವು ಭಕ್ತಾಧಿಗಳ ಸಹಕಾರದಲ್ಲಿ ಈ ಕಾರ್ಯ ಬಹುಪಾಲು ಪೂರ್ಣಗೊಂಡಿದೆ . ಸುಳ್ಯದ ಚೆನ್ನಕೇಶವ ದೇವಸ್ಥಾನ ಮತ್ತು ಈ ಕ್ಷೇತ್ರ ವ್ಯಾಪ್ತಿಯ ಪರಿದಿಯಲ್ಲಿ ಒಳ್ಳೆಯದಾಗುವ ಬಗ್ಗೆ ಚಿಂತನೆಯಲ್ಲಿ ಕಂಡುಬಂದಿರುವುದರಿಂದ ಕ್ಷೇತ್ರ ನಿರ್ಮಾಣ ಕಾರ್ಯವನ್ನು ನಡೆಸಿದ್ದೇವೆ. ಒಟ್ಟು 35 ಲಕ್ಷ ವೆಚ್ಚದಲ್ಲಿ ಕ್ಷೇತ್ರದ ಕಾಮಗಾರಿ ಮತ್ತು ಬ್ರಹ್ಮಕಲಶ ಕಾರ್ಯಕ್ರಮಗಳು ನಡೆಯಲಿದೆ ಎಂದು ಹೇಳಿದರು.

ನೂತನ ಕ್ಷೇತ್ರ ನಿರ್ಮಾಣ ಕಾರ್ಯದಲ್ಲಿ ಭಕ್ತಾಧಿಗಳು
ಸಹಕಾರವನ್ನು ನೀಡಬೇಕೆಂದು ಗೌರವಾಧ್ಯಕ್ಷ ಕೃಷ್ಣ ಕಾಮತ್ ಮತ್ತು ಗೌರವ ಸಲಹೆಗಾರರಾದ ಎಂ.ವೆಂಕಪ್ಪ ಗೌಡ ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೇವಾ ಸಮಿತಿ ಅಧ್ಯಕ್ಷ ಪಿ.ಶಶಿಧರ ಶೆಟ್ಟಿ, ಬ್ರಹ್ಮಕಲಶೋತ್ಸವದ ಗೌರವ ಸಲಹೆಗಾರರಾದ ಎನ್.ಎ.ರಾಮಚಂದ್ರ,ಕೋಶಾಧಿಕಾರಿ ಗಣೇಶ್ ಆಳ್ವ, ಉಪಾಧ್ಯಕ್ಷ ಕೆ. ಗೋಕುಲ್ ದಾಸ್ ,ಸೇವಾ ಸಮಿತಿ ಉಪಾಧ್ಯಕ್ಷ ಡಿ.ಎಸ್.ಗಿರೀಶ್, ಕೋಶಾಧಿಕಾರಿ ಕೃಷ್ಣ ಬೆಟ್ಟ, ರಾಜು ಪಂಡಿತ್ ಉಪಸ್ಥಿತರಿದ್ದರು.

