ಪುತ್ತೂರು SDPI ಅಭ್ಯರ್ಥಿಯಾಗಿ ಶಾಫಿ ಬೆಳ್ಳಾರೆ ಘೋಷಣೆ..

ಪುತ್ತೂರು SDPI ಅಭ್ಯರ್ಥಿಯಾಗಿ ಶಾಫಿ ಬೆಳ್ಳಾರೆ ಘೋಷಣೆ..

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು
ವಿಧಾನಸಭಾ ಕ್ಷೇತ್ರ ಎಸ್ಡಿಪಿಐ ತಕ್ಕ ಮಟ್ಟಿನ ಪ್ರಾಬಲ್ಯ
ತೋರಿಸಬಲ್ಲಂತಹ ಕ್ಷೇತ್ರ. ಆದರೆ ಪ್ರವೀಣ್ ನೆಟ್ಟಾರ್
ಹತ್ಯೆ ಬಳಿಕ ಆದ ಬೆಳವಣಿಗೆ ಪಕ್ಷದ ಚಟುವಟಿಕೆಗೆ
ಹಿನ್ನಡೆಯಾಗಿದೆ ಅನ್ನೋ ಮಾತು ಕೇಳಿ ಬರ್ತಿದೆ.
ಪ್ರವೀಣ್ ನೆಟ್ಟಾರ್ ಹತ್ಯೆ ಕೇಸ್ ನಲ್ಲಿ ಕೊನೆಯದಾಗಿ
ಬಂಧಿತರಾದ ಬೆಳ್ಳಾರೆ ಸಹೋದರರಿಂದಾಗಿ ಪಕ್ಷದ
ಚಟುವಟಿಕೆಗೆ ಭಾರೀ ದೊಡ್ಡ ಪೆಟ್ಟು ಬಿದ್ದಿದೆ. ಸಂಘಟನಾ ಚತುರರಾಗಿದ್ದ ಬೆಳ್ಳಾರೆಯ ಶಾಫಿ ಬೆಳ್ಳಾರೆ ಹಾಗೂ ಇಕ್ಬಾಲ್ ಬೆಳ್ಳಾರೆ ಸದ್ಯ ವಿಚಾರಣಾಧೀನ ಖೈದಿಯಾಗಿ ಬೆಂಗಳೂರು ಜೈಲಿನಲ್ಲಿ ಇರುವುದರಿಂದ ಪಕ್ಷದ ಚಟುವಟಿಕೆ ಅಷ್ಟಾಗಿ ನಡೆಯುತ್ತಿಲ್ಲ ಅನ್ನೋದಕ್ಕೆ ಪಕ್ಷದ ನೀರಸ ಚಟುವಟಿಕೆ ಸಾಕ್ಷಿ ಹೇಳುತ್ತಿದೆ. ಆದ್ರೆ ಇದೀಗ ಪತ್ತೂರಿನಲ್ಲಿ ನಡೆದ ಎಸ್ ಡಿ ಪಿ ಐ ಸಮಾವೇಶದಲ್ಲಿ ಪುತ್ತೂರು ಕ್ಷೇತ್ರಕ್ಕೆ ಎಸ್ ಡಿ ಪಿ ಐ ಪಕ್ಷ ತನ್ನ ಅಭ್ಯರ್ಥಿಯನ್ನ ಘೋಷಣೆ ಮಾಡಿದೆ ಎಂದು ತಿಳಿದು ಬಂದಿದೆ. ನೆಟ್ಟಾರ್ ಹತ್ಯೆ ಕೇಸ್ ನಲ್ಲಿ ಬಂಧಿತನಾಗಿರುವ ಶಾಫಿ ಬೆಳ್ಳಾರೆಯನ್ನ ಪುತ್ತೂರು ಎಸ್ ಡಿ ಪಿ ಐ ಅಭ್ಯರ್ಥಿಯನ್ನಾಗಿ ಎಸ್ ಡಿ ಪಿ ಐ ರಾಜ್ಯ ಅಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಘೋಷಣೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಜೈಲಿನಿಂದಲೇ ಸ್ಪರ್ಧೆ!

ಹೌದು, ಇನ್ನು ಶಾಫಿ ಬೆಳ್ಳಾರೆ ಜೈಲಿನಿಂದಲೇ
ಸ್ಪರ್ಧಿಸಲಿದ್ದಾರೆ. ಪ್ರಜಾಪ್ರಭುತ್ವದ ಚುನಾವಣಾ ಕಣದಲ್ಲಿ ಜೈಲಿನಿಂದಲೂ ನಾಮಪತ್ರ ಸಲ್ಲಿಸಲು ಅವಕಾಶವಿರುತ್ತದೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವೂ ಇರುತ್ತದೆ.
ಆದರೆ, ಆರೋಪಿತನ ಆರೋಪ ಸಾಬೀತಾಗಿ
ನ್ಯಾಯಾಲಯದಿಂದ 2 ವರ್ಷಗಳಿಗಿಂತ ಹೆಚ್ಚು ಕಾಲ
ಶಿಕ್ಷೆಗೆ ಗುರಿಯಾದಲ್ಲಿ ಆತನ ಶಾಸಕ ಸ್ಥಾನ ತಕ್ಷಣದಿಂದಲೇ ಅನರ್ಹಗೊಳ್ಳುತ್ತದೆ. ಇತ್ತೀಚೆಗೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಶಾಸಕ, ವಿವಾದಾತ್ಮಕ ನಾಯಕ ಅಜಂ ಖಾನ್ ಕೂಡಾ 3 ವರ್ಷಗಳ ಕಾಲ ಶಿಕ್ಷೆಗೆ ಗುರಿಯಾದ ಹಿನ್ನೆಲೆ ಅನರ್ಹಗೊಂಡಿದ್ದರು.
ಒಟ್ಟಿನಲ್ಲಿ ಈ ಎಲ್ಲಾ ಬೆಳವಣಿಗೆ ಬಳಿಕ ಪುತ್ತೂರು
ಕ್ಷೇತ್ರದಲ್ಲಿ ಎಸ್ ಡಿ ಪಿ ಐ ಸ್ಪರ್ಧೆ ಕುತೂಹಲ ಹುಟ್ಟು ಹಾಕಿದೆ.

ರಾಜ್ಯ