ರಾಜ್ಯ

ಉಡುಪಿ : ಮಾದಕ ವಸ್ತು ಮಾರಾಟಕ್ಕೆ ಯತ್ನ; ನಾಲ್ವರು ವಶಕ್ಕೆ

ಉಡುಪಿ: ನಿಷೇಧಿತ ಮಾದಕ ವಸ್ತು ಎಂಡಿಎಂಎ ಪೌಡರ್‌ ಮಾರಾಟಕ್ಕೆ ಯತ್ನಿಸಿದ ನಾಲ್ಕು ಮಂದಿಯನ್ನು ಸೆನ್‌ ಅಪರಾಧ ದಳ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.

ಬೈಂದೂರು ತಾಲೂಕು ಮರವಂತೆ ಬೀಚ್‌ ಸಮೀಪ ಕೆಲವು ವ್ಯಕ್ತಿಗಳು ಕಾರಿನಲ್ಲಿ ನಿಷೇದಿತ ಮಾದಕ ವಸ್ತು ಎಂಡಿಎಂಎ ಪೌಡರ್‌ ಅನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ದಾಳಿ ಸಂದರ್ಭ ಅಬ್ರಾರ್‌ ಶೇಖ್‌, ಮೊಹಮ್ಮದ್‌ ಇಸ್ಮಾಯಿಲ್‌ ಫ‌ರ್ಹಾನ್‌, ಮೊಹಮ್ಮದ್‌ ಜಿಯಾಮ್‌ ಬೆಳ್ಳಿ, ನೌಮನ್‌ ಸಜ್ಜಾದ್‌ ಮುಸ್ತಕೀಮ್‌ ಕೆವಾಕ ಎಂಬವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಾಳಿಯಲ್ಲಿ 15. 59 ಮಿಲಿ ಗ್ರಾಂ ತೂಕದ 78 ಸಾವಿರ ರೂ. ಮೊತ್ತದ ಎಂಡಿಎಂಎ ಪೌಡರ್‌, ಆಪಾದಿತರು ಬಳಸಿದ್ದ 5 ಮೊಬೈಲ್‌, ಮಾದಕ ವಸ್ತು ಮಾರಾಟಕ್ಕೆ ಬಳಸಿದ ಕಾರು ಸಹಿತ 11,28,000 ರೂ. ಮೊತ್ತದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ಪೌಡರ್‌ ಅನ್ನು ಬೆಂಗಳೂರಿನ ದಾವೂದ್‌ ಮತ್ತು ಇಸಾಕ್‌ ಅವರಿಂದ ಖರೀದಿಸಿರುವ ಬಗ್ಗೆ ತನಿಖೆ ವೇಳೆ ಪೊಲೀಸರಲ್ಲಿ ಹೇಳಿದ್ದಾರೆ. ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Response

error: Content is protected !!