![](https://newsroomfirst.com/wp-content/uploads/2025/01/C07651B1-821D-459B-ADB2-405B937FC130.jpeg)
![](https://newsroomfirst.com/wp-content/uploads/2025/01/C07651B1-821D-459B-ADB2-405B937FC130.jpeg)
ಪುತ್ತೂರು: ಚಾಲಕ ನಿದ್ದೆ ಮಂಪರಿಗೆ ಒಳಗಾಗಿ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಅಂಚಿನ ಕಂದಕಕ್ಕೆ ಉರುಳಿ ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಾದ ಘಟನೆ ಉಪ್ಪಿನಂಗಡಿ ಹೆದ್ದಾರಿಯ ಸೇಡಿಯಾಪು ಸಮೀಪದ ಕಾಪು ಎಂಬಲ್ಲಿ ನಡೆದಿದೆ.
ಕಾರಿನಲ್ಲಿದ್ದವರು ಒತ್ತೆಕೋಲದಲ್ಲಿ ಭಾಗವಹಿಸಿ ವಾಪಸ್ಸು ಮನೆಗೆ ತೆರಳುತ್ತಿದಾಗ ಚಾಲಕ ನಿದ್ದೆ ಮಂಪರಿಗೆ ಒಳಗಾಗಿ ಈ ಘಟನೆ ಸಂಭವಿಸಿದ್ದು 10 ವರ್ಷದ ಬಾಲಕನ ಸಮಯ ಪ್ರಜ್ಞೆಯಿಂದ ಕಾರಿನಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಾರುತಿ ಕಾರು ( KA 53 P 4148) ಪುತ್ತೂರಿನಿಂದ ಉಪ್ಪಿನಂಗಡಿ ಕಡೆಗೆ ಚಲಿಸುತ್ತಿದ್ದ ವೇಳೆ, ಸೇಡಿಯಾಪು ಜಂಕ್ಷನ್‌ನಿಂದ 250 ಮೀ ದೂರದಲ್ಲಿ ಕಾವು ಎಂಬಲ್ಲಿ ಎಡ ಬದಿಗೆ ಚಲಿಸಿ ತೋಟದ ನೀರು ಹರಿಯುವ ಕಾಲುವೆಗೆ ಬಿದ್ದಿದೆ. ಕಾರು ಕಾಲುವೆ ಒಳಗೆ ಸಿಕ್ಕಿ ಹಾಕಿ ಕೊಂಡಿದ್ದು ಚಾಲಕನ ಬದಿಯ ಡೋರ್ ಮೇಲ್ಮುಖವಾಗಿ ಬಿದ್ದಿದ್ದು. ಸಹ ಚಾಲಕನ ಡೋರ್‌ನ ಬದಿ ಮಣ್ಣಿನಡಿಗೆ ಬಿದ್ದಿದೆ. ಘಟನೆಯೂ ಬೆಳಿಗ್ಗೆ 5.45ರಿಂದ 6 ಗಂಟೆಯ ಸುಮಾರಿಗೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಉಜಿರೆಯ ಪಾರ ನಿವಾಸಿ ಚರಣ್ ಎಂಬವರು ಕಾರನ್ನು ಚಾಲನೆ ಮಡುತ್ತಿದ್ದರು ಎಂದು ತಿಳಿದು ಬಂದಿದೆ. ಕಾರಿನಲ್ಲಿ ಚರಣ್. ಅವರ ತಂದೆ, ಬಾವ ಹಾಗೂ ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದರು. ಮುಂಡೂರಿನಲ್ಲಿ ನಡೆಯುತ್ತಿದ್ದ ಒತ್ತೆ ಕೋಲದಲ್ಲಿ ಭಾಗವಹಿಸಿ ಬರುತ್ತಿದ್ದಾಗ ಘಟನೆ ನಡೆದಿದೆ.
ನಿದ್ದೆ ಮಂಪರಿನಿಂದಾಗಿ ಕಾರು ನಿಯಂತ್ರಣ ತಪ್ಪಿ 10 ಆಡಿ ಆಳದ ಕಂದಕಕ್ಕೆ ಉರುಳಿದೆ. ಈ ವೇಳೆ ಕಾರಿನಲ್ಲಿದ್ದ ಚರಣ್ ಅವರ ಅಕ್ಕನ ಮಗ 5ನೇ ತರಗತಿ ಓದುತ್ತಿರುವ ವನೀಶ್ ಅಸಾಧರಣ ಸಮಯ ಪ್ರಜ್ಞೆ ಮೆರೆದು, ಕಾರಿನಲ್ಲಿ ತೆವಳಿಕೊಂಡು ಹೋಗಿ ಕಾರಿನ ಡೋರ್ ತೆಗೆದು ಹೊರ ಬಂದಿದ್ದಾನೆ. ಬಳಿಕ ಕಂದಕದಿಂದ ಮೇಲೆ ರಸ್ತೆಗೆ ಬಂದು ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನವನ್ನು ನಿಲ್ಲಿಸಿ ಅವರ ಸಹಾಯ ಪಡೆದು ಕಾರಿನಲ್ಲಿದ್ದವರನ್ನು ಮೇಲಕ್ಕೆತ್ತಲು ಸಹಾಯ ಕೇಳಿದ್ದಾನೆ. ಅವರ ಸಹಾಯದಿಂದ ಕಾರಿನಲ್ಲಿದ್ದವರನ್ನು ರಕ್ಷಿಸಲಾಗಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಐವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.