ರಾಜ್ಯ

ಮಂಗಳೂರು : 134 ಸೈಬರ್‌ ಪ್ರಕರಣ; 40.46 ಕೋಟಿ ರೂ. ವಂಚನೆ

ಮಂಗಳೂರು: ಮಂಗಳೂರು ನಗರ ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ 2024ರಲ್ಲಿ ಒಟ್ಟು 134 ಸೈಬರ್‌ ವಂಚನೆ ಪ್ರಕರಣಗಳು ವರದಿಯಾಗಿದ್ದು ಇದರಲ್ಲಿ 40,46,75,693 ರೂ. ವಂಚಿಸಲಾಗಿದೆ. 42 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ತಿಳಿಸಿದ್ದಾರೆ.

ಸೆನ್‌ ಪೊಲೀಸ್‌ ಠಾಣೆಯಲ್ಲಿ 62 ಹಾಗೂ ಇತರ ಪೊಲೀಸ್‌ ಠಾಣೆಗಳಲ್ಲಿ 72 ಪ್ರಕರಣಗಳು ದಾಖಲಾಗಿವೆ. 2023ರಲ್ಲಿ ಸೆನ್‌ ಪೊಲೀಸ್‌ ಠಾಣೆಯಲ್ಲಿ 196 ಹಾಗೂ ಇತರ ಪೊಲೀಸ್‌ ಠಾಣೆಗಳಲ್ಲಿ 40 ಪ್ರಕರಣಗಳು ದಾಖಲಾಗಿದ್ದವು. 2023ರಲ್ಲಿ 9.83 ಕೋ.ರೂ. ವಂಚನೆ ನಡೆದಿದ್ದು ಅದರಲ್ಲಿ 1.17 ಕೋ.ರೂ.ಗಳನ್ನು ದೂರುದಾರರಿಗೆ ಹಿಂದಿರುಗಿಸಲಾಗಿತ್ತು. 2024ರಲ್ಲಿ ಹೂಡಿಕೆ ಹೆಸರಿನ ವಂಚನೆಗೆ ಸಂಬಂಧಿಸಿದ 67 ಪ್ರಕರಣಗಳಲ್ಲಿ 30,36,61,299 ರೂ., ಫೆಡೆಕ್ಸ್‌, ಡಿಜಿಟಲ್‌ ಅರೆಸ್ಟ್‌, ಕೊರಿಯರ್‌ ಮತ್ತು ಕಸ್ಟಮ್ಸ್‌ ಹೆಸರಿನ 25 ಪ್ರಕರಣಗಳಲ್ಲಿ 7,07,99,645 ರೂ.ಗಳನ್ನು ವಂಚಿಸಲಾಗಿದೆ.

ಉದ್ಯೋಗ ನೀಡುವ ಆಮಿಷವೊಡ್ಡಿರುವುದಕ್ಕೆ ಸಂಬಂಧಿಸಿ 8 ಪ್ರಕರಣಗಳು ದಾಖಲಾಗಿದ್ದು ಇದರಲ್ಲಿ 1,21,64,788 ರೂ. ವಂಚಿಸಲಾಗಿದೆ. ವಿವಾಹ ಸಂಬಂಧಿ 4 ವಂಚನೆ ಪ್ರಕರಣಗಳಲ್ಲಿ 60,46,708 ರೂ. ವಂಚನೆ ನಡೆದಿದೆ. ಒಎಲ್‌ಎಕ್ಸ್‌/ ಆನ್‌ಲೈನ್‌ ಶಾಪಿಂಗ್‌ಗೆ ಸಂಬಂಧಿಸಿದ 3 ಪ್ರಕರಣಗಳಲ್ಲಿ 5,93,626 ರೂ. ವಂಚಿಸಲಾಗಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಸಂಬಂಧಿಸಿ 5 ಪ್ರಕರಣಗಳಲ್ಲಿ 41,96,000 ರೂ. ವಂಚನೆ ಮಾಡಲಾಗಿದೆ. ಜಾಹೀರಾತಿಗೆ ಸಂಬಂಧಿಸಿ 4 ಪ್ರಕರಣಗಳಲ್ಲಿ 50,000 ರೂ., ಕೆವೈಸಿ ಅಪ್‌ಡೇಟ್‌ ಹೆಸರಿನಲ್ಲಿ ನಡೆದ 3 ಪ್ರಕರಣಗಳಲ್ಲಿ 8,35,000 ರೂ. ಹಾಗೂ ಇತರ 15 ವಂಚನೆಗಳಲ್ಲಿ 63,28,622 ರೂ. ವಂಚಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

42 ಆರೋಪಿಗಳ ಬಂಧನ

ಸೈಬರ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ವರ್ಷ ಒಟ್ಟು 42 ಆರೋಪಿಗಳನ್ನು ಬಂಧಿಸಲಾಗಿದ್ದು ಇದರಲ್ಲಿ ಕರ್ನಾಟಕದ 15 ಮಂದಿ, ಒಡಿಸ್ಸಾ, ಮಹಾರಾಷ್ಟ್ರ, ರಾಜಸ್ತಾನ, ಹೊಸದಿಲ್ಲಿ ಮತ್ತು ಜಮ್ಮು ಕಾಶ್ಮೀರದ ತಲಾ ಒಬ್ಬರು, ಆಂಧ್ರಪ್ರದೇಶದ ಇಬ್ಬರು, ತಮಿಳುನಾಡಿನ 9 ಮಂದಿ, ಕೇರಳದ 11 ಮಂದಿ ಸೇರಿದ್ದಾರೆ.

ಪೋರ್ಟಲ್‌ ದೂರುಗಳು

ನ್ಯಾಷನಲ್‌ ಪೋರ್ಟಲ್‌ನಲ್ಲಿ ದಾಖಲಾದ 5,498 ದೂರುಗಳ ಪೈಕಿ 215ರಲ್ಲಿ ಎಫ್ಐಆರ್‌ ದಾಖಲಿಸಲಾಗಿದೆ. 4,907 ಪ್ರಕರಣಗಳನ್ನು ಮುಕ್ತಾಯ ಗೊಳಿಸಲಾಗಿದ್ದು 591 ಪ್ರಕರಣ ಬಾಕಿ ಇದೆ. ಮಹಿಳೆಯರಿಗೆ ಸಂಬಂಧಿಸಿ 10 ಮತ್ತು ಮಕ್ಕಳಿಗೆ ಸಂಬಂಧಿಸಿ 8 ಸೈಬರ್‌ ಪ್ರಕರಣಗಳು ದಾಖಲಾಗಿವೆ ಎಂದು ಆಯುಕ್ತರು ತಿಳಿಸಿದ್ದಾರೆ.

ಜಾಗೃತಿ ಕಾರ್ಯಕ್ರಮ

ಕಮಿಷನರೆಟ್‌ ವ್ಯಾಪ್ತಿಯ ಶಾಲೆ, ಕಾಲೇಜು, ವಸತಿ ಪ್ರದೇಶಗಳು, ಕೆಲಸದ ಸ್ಥಳಗಳು ಮೊದಲಾದೆಡೆ ಒಟ್ಟು 217 ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.


2.55 ಕೋ.ರೂ. ವಾಪಸ್‌; 9.32 ಕೋಟಿಗೆ ತಡೆ
ಈ ವರ್ಷ ವಂಚಕರು ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದ 40,46,75,693 ರೂ.ಗಳ ಪೈಕಿ 9,32,54,814 ರೂ.ಗಳ ವರ್ಗಾವಣೆಯನ್ನು ಖಾತೆಯಲ್ಲಿ ತಡೆಹಿಡಿಯಲಾಗಿದೆ. 2,55,45,674 ರೂ.ಗಳನ್ನು ದೂರುದಾರರಿಗೆ ವಾಪಸ್‌ ನೀಡಲಾಗಿದೆ ಎಂದವರು ತಿಳಿಸಿದ್ದಾರೆ.

Leave a Response

error: Content is protected !!