ಮಂಗಳೂರು: ಮೂಗನಂತೆ ನಟಿಸಿ ನೀರು ಕೊಟ್ಟ ವೃದ್ದ ದಂಪತಿಯ ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 10 ವರ್ಷಗಳ ಸಜೆ ವಿಧಿಸಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
2016ರ ನವೆಂಬರ್ 10-11ರ ರಾತ್ರಿ ವೃದ್ಧ ದಂಪತಿ ವರ್ಕಿ ಕೆ.ವಿ (85) ಮತ್ತು ಎಲಿಕುಟ್ಟಿ(80) ಎಂಬವರನ್ನು ರಾಜು ಕಲ್ಲವಡ್ಡರ್ ಕೊಲೆಗೈದು ಅವರ ಮನೆಯಲ್ಲಿದ್ದ ನಗ ನಗದು ಸೇರಿದಂತೆ 4.50 ಲಕ್ಷ ಮೌಲ್ಯದ ಸೊತ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.ಗದಗ ಜಿಲ್ಲೆಯ ಬಿ.ಸಿ.ಕೇರಿ ನಿವಾಸಿ ರಾಜು ಕಲ್ಲವಡ್ದರ್ ಶಿಕ್ಷೆಗೊಳಗಾದ ಅಪರಾಧಿ. ಈತ ಬೆಳ್ತಂಗಡಿಯ ನೆರಿಯಾ ಗ್ರಾಮದ ಬಾಂಜಾರು ಮಲೆ ಎಂಬಲ್ಲಿ ಡ್ಯಾಂ ನಿರ್ಮಾಣಕ್ಕೆ ಕೂಲಿ ಕೆಲಸ ಮಾಡುತ್ತಿದ್ದ.
2016ರ ನವೆಂಬರ್ 10ರಂದು ರಾತ್ರಿ 11ರಿಂದ ಬೆಳಗಿನ ಜಾವ 3ರ ಮಧ್ಯೆ ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಕಲೇರಿಕಲ್ ಎಂಬಲ್ಲಿ ವಾಸವಿದ್ದ ವೃದ್ಧ ದಂಪತಿ ವರ್ಕಿ ಕೆ.ವಿ.(85) ಮತ್ತು ಎಲಿಕುಟ್ಟಿ (80) ಎಂಬವರ ಮನೆಗೆ ಬಂದಿದ್ದ.ಬಳಿಕ ಮೂಗನಂತೆ ನಟಿಸಿ, ಕುಡಿಯಲು ನೀರು ಕೇಳಿದ್ದಾನೆ. ಆ ಮೇಲೆ ದಾರಿ ತೋರಿಸಬೇಕು ಎಂದು ನೆಪವೊಡ್ಡಿದ್ದಾನೆ. ಅದರಂತೆ ವರ್ಕಿ ಕೆ.ವಿ. ಅವರು ರಾಜುವಿಗೆ ಕತ್ತಲೆಯಲ್ಲಿ ಟಾರ್ಚ್‌ಲೈಟ್ ಮೂಲಕ ದಾರಿ ತೋರಿಸುತ್ತಾ ಮುಂದೆ ಹೋಗಿದ್ದಾರೆ. ಈ ವೇಳೆ ಮನೆಯಿಂದ ಸುಮಾರು 70 ಮೀ. ದೂರದಲ್ಲಿ ಆತ ವರ್ಕಿಯವರಿಗೆ ಉರುಗೋಲಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ.
ಬಳಿಕ ಉಟ್ಟಿದ್ದ ಲುಂಗಿಯಿಂದಲೇ ಅವರ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದ.ನಂತರ ಮನೆಯೊಳಗೆ ಪ್ರವೇಶಿಸಿ ಸೊತ್ತುಗಳನ್ನು ಜಾಲಾಡಿದ್ದಾನೆ. ಇದರಿಂದ ಎಚ್ಚರಗೊಂಡ ಎಲಿಕುಟ್ಟಿಯವರಿಗೂ ಆರೋಪಿಯು ಮರದ ದೊಣ್ಣೆಯಿಂದ ಹಲ್ಲೆ ನಡೆಸಿ, ಬಟ್ಟೆಯಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಬಳಿಕ ಮನೆಯ ಗೋದ್ರೇಜ್, ಕಪಾಟುಗಳ ಬಾಗಿಲು ಮುರಿದು 25 ತೊಲ ಚಿನ್ನ ಹಾಗೂ ನಗದು ಸೇರಿದಂತೆ ಅಂದಾಜು 4,50,000 ರೂ.ಗಳನ್ನು ಕದ್ದೊಯ್ದಿದ್ದ.
ವಿಚಾರಣೆ ಮುಗಿಸಿದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯದ ನ್ಯಾಯಾಧೀಶೆ ಪ್ರೀತಿ ಕೆ.ಪಿ. ಪ್ರಕರಣದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ, ಆರೋಪಿತ ತಪ್ಪಿತಸ್ಥನೆಂದು ತೀರ್ಪು ನೀಡಿದ್ದಾರೆ. ಅದರಂತೆ ಆರೋಪಿಗೆ ಭಾ.ದಂ.ಸಂ ಕಲಂ 392ಕ್ಕೆ 10 ವರ್ಷಗಳ ಕಾಲ ಕಠಿಣ ಸಜೆ ಹಾಗೂ 10 ಸಾವಿರ ರೂ. ದಂಡ ವಿಧಿಸಲಾಗಿದೆ. ಒಂದು ವೇಳೆ, ದಂಡ ಪಾವತಿಸಲು ವಿಫಲನಾದರೆ 3 ತಿಂಗಳ ಕಠಿಣ ಸಜೆಯನ್ನು ಅನುಭವಿಸಬೇಕು. ಭಾ.ದಂ.ಸಂ ಕಲಂ 302ರಡಿ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ಹಾಗೂ ದಂಡ ಪಾವತಿಸಲು ವಿಫಲನಾದಲ್ಲಿ 3 ತಿಂಗಳ ಕಠಿಣ ಸಜೆಯನ್ನು ವಿಧಿಸಿ ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ.
ಈ ಎರಡು ಶಿಕ್ಷೆಗಳನ್ನು ಒಂದರ ನಂತರ ಒಂದರಂತೆ ಅನುಭವಿಸಲು ಆದೇಶಿಸಲಾಗಿದೆ. ಅಪರಾಧಿ ದಸ್ತಗಿರಿಯಾದ ಕಾಲದಿಂದ ಈವರೆಗೂ ನ್ಯಾಯಾಂಗ ಬಂಧನದಲ್ಲಿರುವ ಅವಧಿಯನ್ನು ಕಡಿತಗೊಳಿಸಿ, ಉಳಿದ ಅವಧಿಗೆ ಕಠಿಣ ಸಜೆ ಅನುಭವಿಸಲು ಆದೇಶ ಹೊರಡಿಸಲಾಗಿದೆ