ಬೆಂಗಳೂರು: ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಚಾಮರಾಜಪೇಟೆಯ ಓಲ್ಡ್ ಪೆನ್ಮನ್ ಮೊಹಲ್ಲಾದಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದ ರಕ್ತದ ಕೋಡಿಯನ್ನೇ ಹರಿಸಿದ್ದಾರೆ. ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದ್ದು, ಹಸುಗಳಿಗೆ ಚಾಮರಾಜಪೇಟೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಚಾಮರಾಜಪೇಚೆಯ ಕರ್ಣ ಎಂಬುವವರಿಗೆ ಸೇರಿದ ಹಸುಗಳ ಕೆಚ್ಚಲನ್ನು ಕೊಯ್ದು ದುರುಳರು ವಿಕೃತಿ ಮೆರೆದಿದ್ದಾರೆ. ಅವರ ಬಳಿ 8 ಹಸುಗಳಿದ್ದು, ಈ ಪೈಕಿ ಮೂರು-ನಾಲ್ಕು ಹಸುಗಳು ಮನೆಯಿಂದ ಸ್ವಲ್ಪ ದೂರದಲ್ಲಿರುವ ರಸ್ತೆಯಲ್ಲಿ ಮಲಗುತ್ತವೆ. ಹೀಗೆ ನಿನ್ನೆ ಮಲಗಿದ್ದ ಹಸುಗಳ ಕೆಚ್ಚಲನ್ನು ತಡರಾತ್ರಿ ಕಿಡಿಗೇಡಿಗಳು ಕೊಯ್ದಿದ್ದಾರೆ. ಮೂಕಪ್ರಾಣಿಗಳ ನರಳಾಟ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಕಾಟನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರಿಂದ ಮಾಹಿತಿ ಪಡೆದಿರುವ ಪೊಲೀಸರು, ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಮೂಕಪ್ರಾಣಿಗಳ ಕೆಚ್ಚಲು ಕೊಯ್ದ ಘಟನೆ ವಿರುದ್ಧ ಸ್ಥಳೀಯರು ಆಕ್ರೋಶಗೊಂಡಿದ್ದು, ಸ್ಥಳಕ್ಕೆ ಬಿಜೆಪಿ ಸಂಸದ ಪಿ.ಸಿ ಮೋಹನ್ ಭೇಟಿ ನೀಡಿ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಈ ಭಾಗದಲ್ಲಿ ಡ್ರಗ್ಸ್, ಗಾಂಜಾ ಸೇವನೆ ಹೆಚ್ಚಿದ್ದರೂ ಪೊಲೀಸರು ಇದಕ್ಕೆ ಕಡಿವಾಣ ಹಾಕುತ್ತಿಲ್ಲ ಎಂದು ದೂರಿದ್ದಾರೆ.