ರಾಜ್ಯ

ಬಿಗ್‌ಬಾಸ್ ಸೀಸನ್ 11 – ಟ್ರೋಫಿ ಗೆದ್ದ ಹನುಮಂತ; ಸೀಸನ್ ಗೆದ್ದ ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಇತಿಹಾಸ ರಚನೆ;

ಬೆಂಗಳೂರು: ಹನುಮಂತ ಲಮಾಣಿ ಹಾವೇರಿಯ ಪ್ರತಿಭಾವಂತ ಯುವ ಗಾಯಕ. ಝೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಬಂದಿದ್ದರು. ಹಳ್ಳಿ ಹಾಡುಗಳನ್ನು ಹಾಡುತ್ತಾ ಜನ ಪ್ರಶಂಸೆಗೆ ಪಾತ್ರರಾಗಿದ್ದ ಜವಾರಿ ಹೈದ, ಸ ರಿ ಗ ಮ ಪ ಸೀಸನ್ 15 ರ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಅವರಿಗೆ 15 ಲಕ್ಷ ರೂ ಮೌಲ್ಯದ ಪ್ಲಾಟ್ ಮತ್ತು 1 ಲಕ್ಷ ರೂ ನಗದು ಬಹುಮಾನ ದೊರೆತಿತ್ತು. ಅಷ್ಟರಲ್ಲಿಯೇ ತನ್ನ ಸರಳ – ಸಜ್ಜನಿಕೆಯಿಂದ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದ ಹನುಮಂತ ಕಳೆದ ವರ್ಷ ನಡೆದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್ ನಲ್ಲಿಯೂ ಭಾಗವಹಿಸಿದ್ದರು.

ಹನುಮಂತನ ಸರಳತೆಯನ್ನು ಮೆಚ್ಚುತ್ತಿದ್ದ ಜನರ ನಡುವೆ ಅವರನ್ನು ಠೀಕಿಸುವವರೂ ಇದ್ದರು. ಅವರು ಮುಗ್ಧರಲ್ಲವೆಂದು ವಾದಿಸುವವರೂ ಇದ್ದರು. ಹೀಗಿರುವಾಗ, ಬಿಗ್ ಬಾಸ್ ಕನ್ನಡ ಸೀಸನ್ 11 ರ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಭಾಗವಹಿಸುವ ಅವಕಾಶ ಹಳ್ಳಿ ಹುಡುಗನ ಪಾಲಾಗುತ್ತದೆ. ಹನುಮಂತ ತನಗೆ ಅದು ಸಾಧ್ಯವಿಲ್ಲದ ಕಾರ್ಯ, ಅಲ್ಲಿಂದ ಹೇಗಾದರೂ ಜಾರಿಕೊಳ್ಳಬೇಕೆಂದು ಭಾವಿಸಿ, ಕಾರ್ಯಕ್ರಮಕ್ಕೆ ಬರುತ್ತಾರೆ. ಆದರೆ ಅದರ ನಂತರ ನಡೆದದ್ದೇ ಬೇರೆ.

ಅಲ್ಲಿನ ಘಟಾನುಘಟಿಗಳ ನಡುವೆ, ತನ್ನದೇ ಆದ ರೀತಿಯಲ್ಲಿ ಆಟಗಳನ್ನು ಆಡುತ್ತಾ, ತನಗೆ ಬಂದ ಎಲ್ಲಾ ಸವಾಲುಗಳನ್ನು ಎದುರಿಸುತ್ತಾ ಮುನ್ನುಗ್ಗುತ್ತಿದ್ದ ಹನುಮಂತನ ಗುಣವೂ ಕನ್ನಡಿಗರ ಮುಂದೆ ತೆರೆದಿಟ್ಟ ಪುಸ್ತಕದಂತಿತ್ತು. ಬೇಧವಿಲ್ಲದೇ ನೀಡುತ್ತಿದ್ದ ಅಭಿಪ್ರಾಯಗಳು, ವಿನಯತೆ, ಚಿಕ್ಕದಾಗಿ ಚೊಕ್ಕವಾಗಿ ಕೊಡುತ್ತಿದ್ದ ಉತ್ತರಗಳು ಎಲ್ಲರ ಮನಸ್ಸನ್ನು ಸೂರೆಗೊಳಿಸಿದ್ದರಲ್ಲಿ ಯಾವುದೇ ಸಂಶಯವಿಲ್ಲ.

ಶುದ್ಧವಾದ ಮನಸ್ಸಿಗೆ ಬಿಗ್‌ಬಾಸ್ ಕನ್ನಡ ಸೀಸನ್ 11 ರ ವಿನ್ನರ್ ಎಂಬ ಪಟ್ಟ ದೊರೆತಿದೆ. ಅಷ್ಟೇ ಅಲ್ಲದೇ, ಬಿಗ್‌ಬಾಸ್ ಟ್ರೋಫಿ ಗೆದ್ದ ಮೊದಲನೇ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಇತಿಹಾಸ ರಚಿಸಿದ್ದಾರೆ. ಈ ಸೀಸನ್ ವಿಜೇತರಾದ ಹನುಮಂತ ₹50 ಲಕ್ಷ ನಗದು ಬಹುಮಾನವನ್ನು ಪಡೆದಿದ್ದಾರೆ.

Leave a Response

error: Content is protected !!