ರಾಜ್ಯ

ಬೆಂಗಳೂರು: ಸಿಲಿಂಡರ್‌ ಸ್ಫೋಟ; ಮಗು ಸೇರಿ ಐವರಿಗೆ ಗಾಯ

ಪೀಣ್ಯ ದಾಸರಹಳ್ಳಿ: ಅಡುಗೆ ಸಿಲಿಂಡರ್‌ನ ಪೈಪ್‌ನಲ್ಲಿ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡ ಪರಿಣಾಮ ಉತ್ತರ ಭಾರತ ಮೂಲದ ದಂಪತಿ, ಮಗು ಸೇರಿ ಐವರು ಗಾಯಗೊಂಡಿರುವ ಘಟನೆ ಪೀಣ್ಯ ಠಾಣೆ ವ್ಯಾಪ್ತಿಯ ಚೊಕ್ಕಸಂದ್ರದ ಪಾಪಯ್ಯ ಲೇಔಟ್‌ನಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಅಸ್ಸಾ ಮೂಲದ ಬಿಜುದಾಸ್‌(35), ಆತನ ಪತ್ನಿ ಅಂಜಲಿದಾಸ್‌(26) ಮತ್ತು ದಂಪತಿಯ 4 ವರ್ಷದ ಮಗಳು ಮಂಜುಶ್ರೀ ಹಾಗೂ ಪಕ್ಕದ ಮನೆಯ ನಿವಾಸಿಗಳಾದ ಶೋಭಾ (40) ಮತ್ತು ಮಂಜುನಾಥ್‌ (18) ಗಾಯಗೊಂಡವರು.ಸದ್ಯ ಬಿಜುದಾಸ್‌ ಮತ್ತು ಆತನ ಪತ್ನಿ ಅಂಜಲಿದಾಸ್‌, ಮಂಜುಶ್ರೀಗೆ ವಿಕ್ಟೋ ರಿಯಾ ಆಸ್ಪತ್ರೆ ಸುಟ್ಟಗಾಯಗಳ ವಿಭಾಗದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶೋಭಾ ಮತ್ತು ಮಂಜುನಾಥ್‌ಗೆ ಸಣ್ಣ ಪ್ರಮಾಣದಲ್ಲಿ ಗಾಯ ಗಳಾಗಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು. ಬಿಜುದಾಸ್‌ ಐದಾರು ವರ್ಷಗಳ ಹಿಂದೆ ಕುಟುಂಬ ಸಮೇತ ಬೆಂಗಳೂರಿಗೆ ಬಂದಿದ್ದು, ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಅಂಜಲಿದಾಸ್‌ ಮನೆಯಲ್ಲೇ ಇರುತ್ತಾರೆ. ಭಾನುವಾರ ರಾತ್ರಿ ದಂಪತಿ ಹಾಗೂ ಮಗು ಊಟ ಮುಗಿಸಿ ನಿದ್ರೆಗೆ ಜಾರಿದ್ದಾರೆ. ಈ ವೇಳೆ ಸಿಲಿಂಡರ್‌ನ ಪೈಪ್‌ನಿಂದ ಅನಿಲ ಸೋರಿಕೆಯಾಗಿದೆ. ಇದು ದಂಪತಿಯ ಗಮನಕ್ಕೆ ಬಂದಿಲ್ಲ.

ಸೋಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಅಂಜಲಿ ಹಾಲು ಕಾಯಿಸಲು ಅಡುಗೆ ಮನೆಗೆ ಹೋಗಿ, ಲೈಟ್‌ ಆನ್‌ ಮಾಡುತ್ತಿದ್ದಂತೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿದೆ.ಬೆಂಕಿಯ ಕೆನ್ನಾಲಿಯಿಂದ ದಂಪತಿ ಹಾಗೂ ಮಗುವಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ಪೀಣ್ಯ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿ ಗಾಯಗೊಂಡಿದ್ದ ದಂಪತಿ ಸೇರಿದಂತೆ ಐದು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆ ಸಂಬಂಧ ಪೀಣ್ಯಾ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿದೆ

Leave a Response

error: Content is protected !!