ನೈನಾ ಜೈಸ್ವಾಲ್ ಹೈದರಾಬಾದಿನ ಯುವ ಪ್ರತಿಭೆ. ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ. ಅವರು ತಮ್ಮ 8ನೇ ವಯಸ್ಸಿನಲ್ಲಿ 10ನೇ ತರಗತಿ, 13ನೇ ವಯಸ್ಸಿನಲ್ಲಿ ಪದವಿ, ಮತ್ತು 22ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ಶೈಕ್ಷಣಿಕ ಸಾಧನೆಗಳ ಜೊತೆಗೆ, ಅವರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಟೇಬಲ್ ಟೆನ್ನಿಸ್ ಚಾಂಪಿಯನ್ ಹಾಗೂ ಮೋಟಿವೇಷನಲ್ ಸ್ಪೀಕರ್ ಆಗಿದ್ದಾರೆ. ಅವರ ಜೀವನ ನಮ್ಮ ಯುವ ಪೀಳಿಗೆಗೆ ಪ್ರೇರಣೆ ನೀಡುವಂತಹದು.
ನೈನಾಳ ಬಾಲ್ಯ ಮತ್ತು ಶಿಕ್ಷಣ
ನೈನಾ ಜೈಸ್ವಾಲ್ 2000 ರ ಮಾರ್ಚ್ 22ರಂದು ಹೈದರಾಬಾದ್‌ನಲ್ಲಿ ಜನಿಸಿದರು. ಇವರ ತಂದೆ ಅಶ್ವಿನಿ ಕುಮಾರ್ ಜೈಸ್ವಾಲ್ ಮತ್ತು ತಾಯಿ ಭಾಗ್ಯಲಕ್ಷ್ಮಿ ಜೈಸ್ವಾಲ್. ತಂದೆ ಅಶ್ವಿನಿ ಕುಮಾರ್ ಜೈಸ್ವಾಲ್ ಅವರು ವೃತ್ತಿಯಲ್ಲಿ ವಕೀಲರು ಮತ್ತು ಶಿಕ್ಷಕರಾಗಿದ್ದರು ಜೊತೆಗೆ ಓರ್ವ ಟೇಬಲ್ ಟೆನ್ನಿಸ್ ಆಟಗಾರ ಹಾಗೂ ತರಬೇತುದಾರರಾಗಿದ್ದರು. ತಾಯಿ ಭಾಗ್ಯಲಕ್ಷ್ಮಿ ಜೈಸ್ವಾಲ್ ಅವರು ನೈನಾಗೆ ಪ್ರಾಥಮಿಕ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನೈನಾ ಜೈಸ್ವಾಲ್ ಗೆ ಓರ್ವ ತಮ್ಮನಿದ್ದು ಅವರ ಹೆಸರು ಅಗಸ್ತ್ಯ ಜೈಸ್ವಾಲ್. ಅವರು ಸಹ ಬಾಲಪ್ರತಿಭೆ ಹಾಗೂ ರಾಷ್ಟ್ರೀಯ ಮಟ್ಟದ ಟೇಬಲ್ ಟೆನ್ನಿಸ್ ಆಟಗಾರನಾಗಿದ್ದಾರೆ.
ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಕೇವಲ 8ನೇ ವಯಸ್ಸಿನಲ್ಲಿ 10ನೇ ತರಗತಿಯನ್ನು ಪೂರ್ಣಗೊಳಿಸಿದರು. 10ನೇ ವಯಸ್ಸಿಗೆ ಪಿಯುಸಿಯನ್ನು ಪೂರೈಸಿ, 13ನೇ ವಯಸ್ಸಿಗೆ ಮಾಸ್ ಕಮ್ಯೂನಿಕೇಶನ್ ಮತ್ತು ಜರ್ನಲಿಸಂನಲ್ಲಿ ಬಿ.ಎ ಪದವಿಯನ್ನು ಪಡೆದಿದ್ದಾರೆ. ನೈನಾ 15ನೇ ವಯಸ್ಸಿಗೆ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನ (ಪಾಲಿಟಿಕಲ್ ಸೈನ್ಸ್) ವಿಷಯದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ) ಪಡೆದುಕೊಂಡರು. ಮುಂದೆ ತಮ್ಮ ಅಧ್ಯಯನವನ್ನು ಮುಂದುವರೆಸಿದ ನೈನಾ, ಆಂಧ್ರ ಪ್ರದೇಶದ ರಾಜಮಹೇಂದ್ರವರಂನ ಆದಿಕವಿ ನನ್ನಯ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪೂರೈಸಿದರು. ಅವರು ಪಿ.ಹೆಚ್.ಡಿ ಗೆ “ಮಹಬೂಬನಗರ ಜಿಲ್ಲೆಯ ಮಹಿಳಾ ಸಬಲೀಕರಣದಲ್ಲಿ ಮೈಕ್ರೋಫೈನಾನ್ಸ್‌ನ ಪಾತ್ರ” ಎಂಬ ವಿಷಯದ ಕುರಿತು ಸಂಶೋಧನೆ ಮಾಡಿದರು. ಅವರು ತನ್ನ 22ನೇ ವಯಸ್ಸಿಗೆ ಪಿಎಚ್.ಡಿ ಪೂರೈಸಿದ ಭಾರತದ ಅತ್ಯಂತ ಕಿರಿಯ ತಜ್ಞರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನೈನಾ ಜೈಸ್ವಾಲ್ ಅವರ ಬಾಲ್ಯ ದಿನಚರಿ ಅತ್ಯಂತ ಶಿಸ್ತುಬದ್ಧವಾಗಿತ್ತು. ಇದರಿಂದ ಅವರು ಶೈಕ್ಷಣಿಕ ಸಾಧನೆ ಮತ್ತು ಟೇಬಲ್ ಟೆನ್ನಿಸ್ ತರಬೇತಿಯನ್ನು ಸಮಾನವಾಗಿ ಸಂಯೋಜಿಸಿಕೊಂಡರು.
ಈ ಸಾಧಕಿಯ ಬಾಲ್ಯ ಹೇಗಿತ್ತು? ಜೀವನ ಶೈಲಿ ಹೇಗಿತ್ತು?
ನೈನಾ ಅವರ ಪೋಷಕರು ಅವರ ಪ್ರತಿಭೆಯನ್ನು ಬಾಲ್ಯದಲ್ಲಿಯೇ ಗುರುತಿಸಿ, ಗೃಹಶಿಕ್ಷಣವನ್ನು ಆಯ್ಕೆ ಮಾಡಿಕೊಂಡರು. ಇದರಿಂದ ಅವರಿಗೆ ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಬೇಕಾದ ನಯೋಪಾಯವು ದೊರೆಯಿತು. ತಂದೆ ಅಶ್ವಿನಿ ಕುಮಾರ್ ಜೈಸ್ವಾಲ್, ಪ್ರಭಾವಶಾಲಿ ಶಿಕ್ಷಕರಾಗಿದ್ದು, ನೈನಾಗೆ ಬಾಲ್ಯದಿಂದ ಸ್ನಾತಕೋತ್ತರ ಪದವಿಯ ವರೆಗೂ ತಾವೇ ಪಾಠವನ್ನು ಹೇಳಿಕೊಟ್ಟರು. ಸಂಯೋಜಿತ ಅಧ್ಯಯನ ವಿಧಾನವು ನೈನಾಗೆ 8ನೇ ವಯಸ್ಸಿನಲ್ಲಿಯೇ 10ನೇ ತರಗತಿಯನ್ನು ಪಾಸ್ ಮಾಡುವುದಕ್ಕೆ ಮತ್ತು 10ನೇ ವಯಸ್ಸಿನಲ್ಲಿ ಪಿಯುಸಿ ಪೂರ್ಣಗೊಳಿಸಲು ನೆರವಾಯಿತು. ಟೇಬಲ್ ಟೆನ್ನಿಸ್ ತರಬೇತಿಯು ಅವರ ದಿನಚರಿಯ ಪ್ರಮುಖ ಭಾಗವಾಗಿತ್ತು. ತಂದೆಯೇ ಅವರ ಟೇಬಲ್ ಟೆನ್ನಿಸ್ ತರಬೇತುದಾರರಾಗಿದ್ದರು, ಆದ್ದರಿಂದ, ತರಬೇತಿ ಮತ್ತು ಅಧ್ಯಯನವನ್ನು ಸಮರ್ಪಕವಾಗಿ ಜೋಡಿಸಲಾಗುತ್ತಿತ್ತು. ಗೃಹ ಶಿಕ್ಷಣವು ನೈನಾಗೆ ಅಧ್ಯಯನ ಮತ್ತು ಕ್ರೀಡಾ ಅಭ್ಯಾಸವನ್ನು ಸಮರ್ಪಕವಾಗಿ ನಿರ್ವಹಿಸಲು ಅನುವು ಮಾಡಿಕೊಟ್ಟಿತು.
ಕ್ರೀಡೆ ಮತ್ತು ಟೇಬಲ್ ಟೆನ್ನಿಸ್ ಸಾಧನೆಗಳು:
ನೈನಾ ಜೈಸ್ವಾಲ್ ಕೇವಲ ಶೈಕ್ಷಣಿಕ ಕ್ಷೇತ್ರದಲ್ಲಷ್ಟೇ ಅಲ್ಲದೇ ಕ್ರೀಡಾ ಕ್ಷೇತ್ರದಲ್ಲಿಯೂ ಅಪರೂಪದ ಸಾಧನೆ ಮಾಡಿದ್ದಾರೆ. ಅವರು ಭಾರತದ ಪ್ರಮುಖ ಟೇಬಲ್ ಟೆನ್ನಿಸ್ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದಾರೆ. ನೈನಾ 2011ರಲ್ಲಿ ITTF (ಅಂತಾರಾಷ್ಟ್ರೀಯ ಟೇಬಲ್ ಟೆನ್ನಿಸ್ ಫೆಡರೇಶನ್) ವರ್ಲ್ಡ್ ಹೋಪ್ಸ್ ತಂಡಕ್ಕೆ ಆಯ್ಕೆಯಾದ ಮೊದಲ ಭಾರತೀಯ ಯುವತಿ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ನೈನಾ ಜೈಸ್ವಾಲ್ ಅವರ ಟೇಬಲ್ ಟೆನ್ನಿಸ್ ಸಾಧನೆಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟವಾಗಿವೆ.
ಅಂತರಾಷ್ಟ್ರೀಯ ಸಾಧನೆಗಳು:
2011:
- ನೈನಾ ಜೈಸ್ವಾಲ್ ITTF ವರ್ಲ್ಡ್ ಹೋಪ್ಸ್ ಟೀಮ್ ಗೆ ಆಯ್ಕೆಯಾದ ಮೊದಲ ಭಾರತೀಯ ಹುಡುಗಿ.
- ಆಸ್ಟ್ರಿಯಾದಲ್ಲಿ ಅಂಡರ್ – 12 ವಿಭಾಗದಲ್ಲಿ 6ನೇ ಸ್ಥಾನ ಪಡೆದವರು.
- ಇಂಡಿಯನ್ ಓಪನ್‌ನಲ್ಲಿ ಕ್ಯಾಡೆಟ್ ಗರ್ಲ್ಸ್ ಟೀಮ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
- ಇಂಡಿಯನ್ ಓಪನ್‌ನಲ್ಲಿ ಕ್ಯಾಡೆಟ್ ಗರ್ಲ್ಸ್ ಸಿಂಗಲ್ಸ್ ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ.
2013:
- ಇರಾನ್‌ನಲ್ಲಿ ನಡೆದ ಫಜರ್ ಕಪ್ ನಲ್ಲಿ ಕ್ಯಾಡೆಟ್ ಗರ್ಲ್ಸ್ ಟೀಮ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
- ಫಜರ್ ಕಪ್ ನಲ್ಲಿ ಕ್ಯಾಡೆಟ್ ಗರ್ಲ್ಸ್ ಡಬಲ್ಸ್ ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
- ಫಜರ್ ಕಪ್ ನಲ್ಲಿ ಕ್ಯಾಡೆಟ್ ಗರ್ಲ್ಸ್ ಸಿಂಗಲ್ಸ್ ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ರಾಷ್ಟ್ರೀಯ ಸಾಧನೆಗಳು:
2010:
- ಕ್ಯಾಡೆಟ್ ಗರ್ಲ್ಸ್ ಸಿಂಗಲ್ಸ್ ನಲ್ಲಿ ರಾಷ್ಟ್ರೀಯ ಚಾಂಪಿಯನ್ (ಚಿನ್ನದ ಪದಕ ವಿಜೇತ) ಆದರು.
- ಕ್ಯಾಡೆಟ್ ಗರ್ಲ್ಸ್ ಟೀಮ್ ಗೆ ರಾಷ್ಟ್ರಪತಿ ರಾಷ್ಟ್ರೋತ್ಕೃಷ್ಠ ಪ್ರಶಸ್ತಿಯನ್ನು ಗೆದ್ದಿದ್ದಾರೆ.
- ಸಬ್-ಜೂನಿಯರ್ ಗರ್ಲ್ಸ್ ಟೀಮ್ ರಾಷ್ಟ್ರಚಾಂಪಿಯನ್‌ಶಿಪ್ ಲಭಿಸಿದೆ.
- ಜೂನಿಯರ್ ಗರ್ಲ್ಸ್ ಟೀಮ್ ರಾಷ್ಟ್ರಚಾಂಪಿಯನ್‌ಶಿಪ್ ದೊರೆತಿದೆ.
- 2011 2011, 2012 ಮತ್ತು 2013 ರಲ್ಲಿ ಪದವಿಪೂರ್ವ ಮಹಿಳಾ ಟೇಬಲ್ ಟೆನ್ನಿಸ್ ರಾಷ್ಟ್ರೀಯ ಟೆನಿಸ್‌ನಲ್ಲಿ ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ವಿಜೇತೆ ಎನಿಸಿಕೊಂಡಿದ್ದಾರೆ.
ನೈನಾ ಕೇವಲ ಶೈಕ್ಷಣಿಕ ಕ್ಷೇತ್ರ ಮತ್ತು ಕ್ರೀಡೆಯಲ್ಲಷ್ಟೇ ಅಲ್ಲದೇ, ಓರ್ವ ಪ್ರಭಾವಿ ಮೋಟಿವೇಷನಲ್ ಸ್ಪೀಕರ್ ಆಗಿಯೂ ಯುವಪೀಳಿಗೆಗೆ ಸ್ಪೂರ್ತಿಯನ್ನು ತುಂಬುತ್ತಿದ್ದಾರೆ. ಭಾರತ ಹಾಗೂ ವಿದೇಶದ ಹಲವಾರು ಶಾಲೆ-ಕಾಲೇಜುಗಳಲ್ಲಿ ಅವರು ಉಪನ್ಯಾಸಗಳನ್ನು ನೀಡುತ್ತಿದ್ದಾರೆ. ನೈನಾ ಜೈಸ್ವಾಲ್ ಅವರು ತಮ್ಮ ಬಾಲಪ್ರತಿಭೆಯಿಂದ ಯಶಸ್ವಿ ವೃತ್ತಿಪರರಾಗುವವರೆಗಿನ ಪ್ರಯಾಣವು ಅನೇಕರನ್ನು ಪ್ರೇರೇಪಿಸಿದೆ. ಅವರು ತಮ್ಮ ಅನುಭವಗಳನ್ನು ಮತ್ತು ಜ್ಞಾನವನ್ನು ವಿವಿಧ ವೇದಿಕೆಯಲ್ಲಿ ಹಂಚಿಕೊಂಡು ಅನೇಕ ಜನರನ್ನು ಪ್ರೇರೇಪಿಸಿದ್ದಾರೆ.
ಓರ್ವ ಮೋಟಿವೇಶನಲ್ ಸ್ಪೀಕರ್ ಆಗಿ – ನೈನಾ ಜಸ್ವಾಲ್
ಜಾಗತಿಕ ಕಾರ್ಯಕ್ರಮಗಳಲ್ಲಿ ಭಾಗಿ: ನೈನಾ ಜೈಸ್ವಾಲ್ ಅನೇಕ ಜಾಗತಿಕ ಸಮ್ಮೇಳನಗಳು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ತಮ್ಮ ಕಥೆಯನ್ನು ಹಂಚಿಕೊಂಡು ಪ್ರೇಕ್ಷಕರನ್ನು ಪ್ರೇರೇಪಿಸಿದ್ದಾರೆ.
ಯುವ ಸಬಲೀಕರಣ: ಅವರು ಯುವಕರೊಂದಿಗೆ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸುವಂತೆ ಪ್ರೋತ್ಸಾಹಿಸುತ್ತಿದ್ದಾರೆ, ಸಮಯ ನಿರ್ವಹಣೆ ಮತ್ತು ಸಮರ್ಪಣೆ ಮಹತ್ವದ ಅರಿವು ಮೂಡಿಸುತ್ತಿದ್ದಾರೆ.
ಬ್ರ್ಯಾಂಡ್ ಅಂಬಾಸಿಡರ್ ಆದ ನೈನಾ ಜೈಸ್ವಾಲ್: ನೈನಾ ಜೈಸ್ವಾಲ್ ಅವರು ಬರ್ಲಿನ್ ಜಾಗತಿಕ ಶಾಂತಿ ದಿನ ದಲ್ಲಿ ಭಾರತದ ಬ್ರ್ಯಾಂಡ್ ಅಂಬಾಸಿಡರ್ ಆಗಿ ಭಾಗವಹಿಸಿದ್ದಾರೆ. ಇದು ಅವರ ಪ್ರಭಾವ ಮತ್ತು ಧನಾತ್ಮಕ ಬದಲಾವಣೆಯ ಪ್ರತಿ ಅವರಿಗಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಅವರು ತಮ್ಮ ಈ ಸಾಧನೆಗಳೆಲ್ಲವೂ ಸಮಯ ನಿರ್ವಹಣಾ ಕೌಶಲ್ಯ ಮತ್ತು ತಮ್ಮ ಹೆತ್ತವರ ನಿರಂತರ ಪ್ರೋತ್ಸಾಹದಿಂದ ಸಾಧ್ಯವಾಯಿತು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.