ಕ್ರೀಡೆ

ಅನೀಶ್ ಸರ್ಕಾರ್: ಚೆಸ್ ಲೋಕದ ಅತಿ ಕಿರಿಯ ಫೈಡ್ – ರೇಟೆಡ್ ಅಚ್ಚರಿ ಪ್ರತಿಭೆ!

ಅನೀಶ್ ಸರ್ಕಾರ್ ಎಂಬ ಕೊಲ್ಕತ್ತಾದ ಮೂರು ವರ್ಷದ ಪೋರ ಚೆಸ್ ಲೋಕದಲ್ಲಿ ತಮ್ಮ ಹೆಸರು ಚಿರಸ್ಥಾಯಿಯಾಗಿಸುವಂತೆ ಮಾಡಿದ್ದಾನೆ. ಜನವರಿ 26, 2021ರಂದು ಹುಟ್ಟಿದ ಅನೀಶ್, ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಚೆಸ್ ಮೇಲೆ ಅಪಾರ ಆಸಕ್ತಿಯನ್ನು ಹೊಂದಿದ್ದು, ಕೇವಲ ಮೂರು ವರ್ಷ ಮತ್ತು ಎಂಟು ತಿಂಗಳ ವಯಸ್ಸಿನಲ್ಲಿ ಅಧಿಕೃತ ಫೈಡ್ ರೇಟಿಂಗ್ ಪಡೆದುಕೊಂಡಿದ್ದಾನೆ.

ಅನೀಶ್ ಚೆಸ್ ಪ್ರೇಮ 2024 ರ ಪ್ರಾರಂಭದಲ್ಲಿ ಪ್ರಾರಂಭವಾಯಿತು. ಯೂಟ್ಯೂಬ್‌ನಲ್ಲಿ ಚೆಸ್ ವಿಡಿಯೋಗಳನ್ನು ನೋಡುತ್ತಿದ್ದ ಅನೀಶ್, ಉಳಿದ ಮಕ್ಕಳಂತೆ ಕಾರ್ಟೂನ್‌ ಮತ್ತು ಮಕ್ಕಳ ಆಟಗಳನ್ನು ವೀಕ್ಷಿಸದೆ, ಗ್ರ್ಯಾಂಡ್‌ ಮಾಸ್ಟರ್ ಮ್ಯಾಗ್ನಸ್ ಕಾರ್ಲ್ಸೆನ್ ಅವರ ಆಟಗಳನ್ನು ವಿಶ್ಲೇಷಿಸುತ್ತಿದ್ದನು. ಅಂತಾರಾಷ್ಟ್ರೀಯ ಮಾಸ್ಟರ್ ಲೆವಿ ರೋಜ್ಮನ್ (ಗಾಥಮ್ ಚೆಸ್) ಅವರ ತಂತ್ರಗಳನ್ನು ಕಲಿಯುತ್ತಿದ್ದನು. ಅವನ ಚೆಸ್ ಆಸಕ್ತಿಯನ್ನು ಅರಿತ ಪೋಷಕರು ಅವನಿಗೆ ಚೆಸ್ ಬೋರ್ಡ್ ಅನ್ನು ತಂದುಕೊಟ್ಟರು. ಆ ಚೆಸ್ ಬೋರ್ಡ್ ಬಳಸಿ, ಅವನು ಕಷ್ಟಕರ ಪಝಲ್‌ಗಳನ್ನು ಬಿಡಿಸುವುದಕ್ಕೆ ಅಭ್ಯಾಸ ಮಾಡುತ್ತಿದ್ದನು.

ಅನೀಶ್ ಚೆಸ್ ಸ್ಪರ್ಧಾತ್ಮಕ ಪಯಾಣ ರ್‍ಯಾಪಿಡ್ ಟೂರ್ನಮೆಂಟ್‌ನಲ್ಲಿ ಪ್ರಾರಂಭವಾಯಿತು. ಅಲ್ಲಿ ಅವನು 11 ಪಂದ್ಯಗಳಲ್ಲಿ 5 ಅಂಕಳನ್ನು ಗಳಿಸಿದನು. ಇದಲ್ಲದೆ, ಅವನಿಗೆ ಭಾರತದ ಶ್ರೇಷ್ಠ ಗ್ರ್ಯಾಂಡ್ ಮಾಸ್ಟರ್ ಅರ್ಜುನ್ ಎರಿಗೈಸಿ ಅವರ ವಿರುದ್ಧ ಸೈಮಲ್ಟೇನಿಯಸ್ ಎಕ್ಸಿಬಿಷನ್ ಪಂದ್ಯವನ್ನಾಡುವ ಅವಕಾಶ ದೊರೆಯಿತು. ಅಕ್ಟೋಬರ್ 2024 ರಲ್ಲಿ ಅವನು ಪಶ್ಚಿಮ ಬಂಗಾಳ ಅಂಡರ್-9 ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ, 140 ಸ್ಪರ್ಧಿಗಳ ಪೈಕಿ 24 ನೇ ಸ್ಥಾನ ಪಡೆದು, 8 ಪಂದ್ಯಗಳಲ್ಲಿ 5.5 ಅಂಕಗಳನ್ನು ಗಳಿಸಿದ್ದಾನೆ. ಈ ಅದ್ಭುತ ಪ್ರದರ್ಶನದಿಂದ ಅವನಿಗೆ ಅಧಿಕೃತ ಫೈಡ್ ರೇಟಿಂಗ್ 1555 ಅನ್ನು ನವೆಂಬರ್ 2024ರಲ್ಲಿ ನೀಡಲಾಯಿತು.

ಪ್ರಸ್ತುತ, ಅನೀಶ್ ಭಾರತದ ಎರಡನೇ ಗ್ರ್ಯಾಂಡ್‌ ಮಾಸ್ಟರ್ ದಿಬ್ಯೇಂದ್ರ ಬರುವಾ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾನೆ. ಅನೀಶ್ ನ ಏಕಾಗ್ರತೆ ಮತ್ತು ಆಸಕ್ತಿಗೆ ಒತ್ತಾಸೆಯಾಗಿ ನಿಂತಿರುವ ಅವನ ಪೋಷಕರು ಅವನಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದಾರೆ. ಅವನು ತನ್ನ ಅತ್ಯಧಿಕ ಸಮಯವನ್ನು ಚೆಸ್‌ನೊಂದಿಗೆ ಕಳೆಯುತ್ತಾ, ತನ್ನ ಕೌಶಲ್ಯವನ್ನು ವೃದ್ಧಿಸುತ್ತಿದ್ದಾನೆ.

ಅನೀಶ್ ಐತಿಹಾಸಿಕ ಸಾಧನೆಯನ್ನು ಗೌರವಿಸಿರುವ ಸರಕಾರವು 2024 ರಲ್ಲಿ ಅವನಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ನೀಡಿದೆ. ಇದರೊಂದಿಗೆ, ಅನೀಶ್ ಈ ಪುರಸ್ಕಾರವನ್ನು ಸ್ವೀಕರಿಸಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಅವರ ಪಯಾಣವು ದೇಶದ ಯುವ ಚೆಸ್ ಆಸಕ್ತರಿಗೆ ಸ್ಪೂರ್ತಿಯಾಗಿದೆ.

ಅನೀಶ್ ಅವರು ತಮ್ಮ ಚೆಸ್ ಪ್ರಯಾಣವನ್ನು ಮುಂದುವರಿಸುತ್ತಿರುವಂತೆ, ಜಾಗತಿಕ ಚೆಸ್ ಸಮುದಾಯವು ಅವರ ಭವಿಷ್ಯದ ಸಾಧನೆಗಳನ್ನು ಅತ್ಯಂತ ಉತ್ಸಾಹದಿಂದ ನಿರೀಕ್ಷಿಸುತ್ತಿದೆ. ಹಲವರು ಅವರಲ್ಲಿರುವ ಅಪಾರ ಸಾಮರ್ಥ್ಯವನ್ನು ಗುರುತಿಸಿದ್ದು, ಅವರು ಭಾರತದ ಶ್ರೇಷ್ಠ ಚೆಸ್ ಪ್ರತಿಭೆಗಳಲ್ಲೊಬ್ಬರಾಗಬಹುದೆಂಬ ನಂಬಿಕೆ ವ್ಯಕ್ತಪಡಿಸಿದ್ದಾರೆ. ಆದರೆ ಪ್ರಸ್ತುತ, ಈ ಯುವ ಪ್ರತಿಭೆ ಕೇವಲ ತನ್ನ ನೆಚ್ಚಿನ ಆಟವನ್ನು ಆನಂದಿಸುತ್ತಿದ್ದಾನೆ.

Leave a Response

error: Content is protected !!