ನವದೆಹಲಿ: ಭಾರತವು 2025ರ ಜನವರಿ 26ರಂದು 75ನೇ ಗಣರಾಜ್ಯೋತ್ಸವವನ್ನು ಆಚರಿಸಲು ಸಜ್ಜಾಗುತ್ತಿದ್ದು, ದೇಶಾದ್ಯಂತ ವ್ಯಾಪಕ ತಯಾರಿಗಳು ನಡೆಯುತ್ತಿವೆ. ಈ ಗಣರಾಜ್ಯೋತ್ಸವ ಪೆರೇಡ್‌ನ ಮೂಲಮಂತ್ರ “ಸ್ವರ್ಣಿಮ್ ಭಾರತ್ : ವೀರಾಸತ್ ಔರ್ ವಿಕಾಸ್”, ಇದು ಭಾರತದ ಶ್ರೀಮಂತ ಪರಂಪರೆ ಮತ್ತು ಪ್ರಗತಿಗೆ ಒತ್ತು ನೀಡುತ್ತದೆ.
ಕರ್ತವ್ಯ ಪಥದಲ್ಲಿ ಪ್ರಮುಖ ಕಾರ್ಯಕ್ರಮ:
ಪ್ರಮುಖ ಕಾರ್ಯಕ್ರಮವು ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿದೆ. ಈ ವರ್ಷದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾದ ಅಧ್ಯಕ್ಷರಾದ ಶ್ರೀ ಪ್ರಬೋವೊ ಸುಬಿಯಾಂತೊ ಅವರು ಭಾಗವಹಿಸುತ್ತಿದ್ದು, ಭಾರತ ಮತ್ತು ಇಂಡೋನೇಷಿಯಾ ನಡುವಿನ ಉತ್ತಮ ಸಾಮರಸ್ಯವನ್ನು ಸಾರುತ್ತಿದ್ದಾರೆ. ಅವರು 2024 ಅಕ್ಟೋಬರ್‌ನಲ್ಲಿ ಪದಗ್ರಹಣ ಮಾಡಿದ ನಂತರ ಭಾರತದ ಮೊಟ್ಟಮೊದಲ ಅಧಿಕೃತ ಭೇಟಿ ಇದಾಗಿದೆ. ಭಾರತದ ಗಣರಾಜ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇಂಡೋನೇಷ್ಯಾದ ನಾಲ್ಕನೇ ಅಧ್ಯಕ್ಷರು ಇವರಾಗಲಿದ್ದಾರೆ.
ಇದಕ್ಕೂ ಮುನ್ನ ಭಾರತದ ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಬಂದ ಇಂಡೋನೇಷ್ಯಾ ದೇಶದ ಅಧ್ಯಕ್ಷರ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಈ ಸುಸಂದರ್ಭದಲ್ಲಿ 90 ನಿಮಿಷಗಳ ಕಾಲ ಪೆರೇಡ್ ನಡೆಯಲಿದ್ದು, 18 ತಂಡಗಳು, 15 ಬ್ಯಾಂಡ್‌ಗಳು ಮತ್ತು ವಿವಿಧ ರಾಜ್ಯ ಮತ್ತು ಸಚಿವಾಲಯಗಳನ್ನು ಪ್ರತಿನಿಧಿಸುವ 31 ಟ್ಯಾಬ್ಲೊಗಳು ಭಾಗವಹಿಸಲಿವೆ. ಈ ವರ್ಷದ ಪೆರೇಡಿನಲ್ಲಿ ಅಂತರರಾಷ್ಟ್ರೀಯ ಸಾಮರಸ್ಯವನ್ನು ಪ್ರತಿನಿಧಿಸುವ ವಿದೇಶೀ ತಂಡವೂ ಭಾಗಿಯಾಗಲಿದೆ.
ಭಾರತೀಯ ಸಶಸ್ತ್ರ ಪಡೆಗಳು: ಪೆರೇಡ್‌ನಲ್ಲಿ ಭಾರತೀಯ ಸೇನೆ, ನೌಕಾಪಡೆ, ಮತ್ತು ವಾಯುಪಡೆಯ ತಂಡಗಳು ತಮ್ಮ ಶಿಸ್ತು ಮತ್ತು ಪ್ರಾಬಲ್ಯದ ಪ್ರದರ್ಶನ ನೀಡಲಿವೆ.
ವಿದೇಶಿ ತಂಡ: 190 ಸದಸ್ಯರನ್ನೊಳಗೊಂಡ ಬ್ಯಾಂಡ್ ಜೊತೆಗೆ 160 ಸದಸ್ಯರು ಇರುವ ಇಂಡೋನೇಷ್ಯಾ ದೇಶದ ತಂಡವು ಭಾರತೀಯರೊಂದಿಗೆ ಪೆರೇಡ್‌ನಲ್ಲಿ ಭಾಗವಹಿಸಲಿದೆ. ಈ ಮೂಲಕ ಅದು ನಮ್ಮ ದೇಶದೊಂದಿಗೆ ಇರುವ ಸಾಮರಸ್ಯವನ್ನು ಪ್ರಪಂಚಕ್ಕೆ ಸಾರಿ ಹೇಳಲಿದೆ.
ದೇಶದ ವಿವಿಧ ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳು ಮತ್ತು ಅನೇಕ ಇಲಾಖೆಗಳು ತಮ್ಮ ತಮ್ಮ ಶ್ರೇಷ್ಠತೆಯನ್ನು ಜಗತ್ತಿಗೆ ಟ್ಯಾಬ್ಲೋ ಮೂಲಕ ಪ್ರಸ್ತುತ ಪಡಿಸಲಿವೆ. 47 ವಿಮಾನಗಳ ವೈಮಾನಿಕ ಪ್ರದರ್ಶನ ಮತ್ತು ಸುಮಾರು 5,000 ಕಲಾವಿದರು ಭಾಗವಹಿಸುವ ಸಾಂಸ್ಕೃತಿಕ ಪ್ರದರ್ಶನಗಳು ನಡೆಯಲಿವೆ.
ಭಾರತಕ್ಕೆ ಆಗಮಿಸಿದ ಇಂಡೋನೇಷ್ಯಾ ಅಧ್ಯಕ್ಷರನ್ನು ಹೇಗೆ ಸ್ವಾಗತಿಸಲಾಯಿತು ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಜನರ ಪಾಲ್ಗೊಳ್ಳುವಿಕೆ:
ಸುಮಾರು 10,000 “ವಿಶೇಷ ಅತಿಥಿ” ಗಳನ್ನು ಪೆರೇಡ್‌ಗೆ ಆಹ್ವಾನಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆಗೈದ ಸಾಧಕರು ಮತ್ತು ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಬಳಸಿದ ಮಹಾನ್ ವ್ಯಕ್ತಿಗಳು ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳುತ್ತಿರುವುದರಿಂದ ಕಾರ್ಯಕ್ರಮದ ಗರಿಮೆಯು ಇನ್ನಷ್ಟು ಹೆಚ್ಚಾಗಲಿದೆ. ವಿಶೇಷ ಅತಿಥಿಗಳಾಗಿ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡ ಅತ್ಯುತ್ತಮ ಗ್ರಾಮಗಳ ಅಧ್ಯಕ್ಷರು, ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ಸ್ವಯಂ ಸೇವೆಗೈದ ಶ್ರೇಷ್ಠರು, ವೈಬ್ರೆಂಟ್ ವಿಲೇಜ್ ಕಾರ್ಯಕ್ರಮದ ಅಡಿಯಲ್ಲಿ ಆಯ್ಕೆಯಾದ ಪ್ರತಿನಿಧಿಗಳು, ಜಲಸಂರಕ್ಷಣೆ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಮಹನೀಯರು, ಉತ್ತಮ ಕಾರ್ಯ ನಿರ್ವಹಿಸಿದ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರು, ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳು, ಚಿಂತಕರು, ವಿಜ್ಞಾನಿಗಳು ಹೀಗೆ ಅನೇಕ ಮಹಾನ್ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
ದೇಶದ ಪ್ರತಿಭೆ, ಪರಿಶ್ರಮ, ಅಭಿವೃದ್ಧಿ, ರಕ್ಷಣೆ ಎಲ್ಲವೂ ಅಂದು ದೆಹಲಿಯಲ್ಲಿಯೇ ಬೀಡು ಬಿಡಲಿರುವುದಂತೂ ಖಚಿತ.
ಭದ್ರತಾ ವ್ಯವಸ್ಥೆ:
ದೇಶವು ಪ್ರಜಾಪ್ರಭುತ್ವದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆ, ರಾಜಧಾನಿ ದೆಹಲಿಯಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿದೆ. ವಿಜಯ್ ಚೌಕ್, ಇಂಡಿಯಾ ಗೇಟ್ ಮತ್ತು ಕರ್ತವ್ಯ ಪಥದಂತಹ ಪ್ರಮುಖ ಭಾಗಗಳಲ್ಲಿ ಜನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಪೆರೇಡ್ ಮುಗಿಯುವವರೆಗೆ ಕಠಿಣವಾಗಿ ಅನುಸರಿಸಲಾಗುತ್ತದೆ. ಇದಲ್ಲದೆ, ಕಾರ್ಯಕ್ರಮದ ಸಮಯದಲ್ಲಿ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳುವುದಕ್ಕಾಗಿ ದೆಹಲಿಯಲ್ಲಿ ವಿಮಾನ ಹಾರಾಟವನ್ನು ನಿಷೇಧಿಸಲಾಗಿದೆ.
ಪೆರೇಡ್ ಜನವರಿ 26, 2025 ರಂದು ಬೆಳಿಗ್ಗೆ 10:30 ಕ್ಕೆ ನವದೆಹಲಿ ಕರ್ತವ್ಯ ಪಥದಲ್ಲಿ ಪ್ರಾರಂಭವಾಗಲಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ರಕ್ಷಣಾ ಮಂತ್ರಾಲಯದ ಅಮಂತ್ರಣ ಪೋರ್ಟಲ್‌ನ ಮೂಲಕ ಅಥವಾ ನವದೆಹಲಿಯ ಖಾಸಗಿ ಕೌಂಟರ್‌ಗಳಲ್ಲಿ ಖರೀದಿಸಬಹುದು.