ಭಾರತದ ಕೀರ್ತಿಯನ್ನು ಬಾಹ್ಯಾಕಾಶಕ್ಕೇರಿಸಿದ ಹೆಮ್ಮೆಯ ಪುತ್ರಿಯ ಪುಣ್ಯ ಸ್ಮರಣೆ; ಕಲ್ಪನಾ ಚಾವ್ಲಾ ನಮ್ಮನ್ನಗಲಿ 22 ವರ್ಷಗಳಾದವು;
ಕನಸುಗಳಿಂದ ಯಶಸ್ಸನ್ನು ಗಳಿಸುವ ದಾರಿ ಇದೆ. ಆದರೆ, ನೀವು ಆ ದಾರಿಯನ್ನು ಅನುಸರಿಸಬೇಕು ಅಷ್ಟೇ!
ನೀವು ಎಂದರೆ ಕೇವಲ ನಿಮ್ಮ ಬುದ್ಧಿವಂತಿಕೆ ಮತ್ತು ಶ್ರಮವಷ್ಟೇ ಹೊರತು ಬೇರೇನೂ ಅಲ್ಲ.
ಕನಸುಗಳ ಅಂದವನ್ನು ಬಲ್ಲವರಿಗಷ್ಟೇ ದೊರೆಯುವುದು ಭವಿಷ್ಯ.
ನೀವು ಹಾರಬೇಕೆಂದಿದ್ದರೆ, ನಿಮ್ಮನ್ನು ಭಾರವಾಗಿಸುವ ವಸ್ತುಗಳನ್ನು ಬಿಟ್ಟುಬಿಡಿ.
ಇವೆಲ್ಲಾ ಭಾರತದ ಹೆಮ್ಮೆಯ ಪುತ್ರಿ ಕಲ್ಪನಾ ಚಾವ್ಲಾ ಅವರು ಆಡಿದ ಮಾತುಗಳು. ಇಂದು ಈ ಮಹಾನ್ ಮಹಿಳೆಯ ಪುಣ್ಯಸ್ಮರಣೆ. ಅವರು ನಮ್ಮನ್ನೆಲ್ಲಾ ಅಗಲಿ ಇಂದಿಗೆ 22 ವರ್ಷಗಳಾದವು. ಕಲ್ಪನಾ ಚಾವ್ಲಾ ಬಾಹ್ಯಾಕಾಶಕ್ಕೆ ಹಾರಿದ ಭಾರತೀಯ ಮೂಲದ ಮೊದಲ ಮಹಿಳೆಯಾಗಿದ್ದರು. ದುರಾದೃಷ್ಟವಶಾತ್ ಅವರು 2003 ರ ಫೆಬ್ರವರಿ 1 ರಂದು ಕೊಲಂಬಿಯಾ ಬಾಹ್ಯಾಕಾಶ ನೌಕೆಯು ಭೂಮಿಯ ವಾಯುಮಂಡಲವನ್ನು ಸ್ಪರ್ಶಿಸುವ ವೇಳೆಗೆ ನಡೆದ ದುರಂತದಲ್ಲಿ ಸಾವಿಗೀಡಾದರು.
ಕಲ್ಪನಾ ಚಾವ್ಲಾ STS-107 ಬಾಹ್ಯಾಕಾಶ ಯಾನದ ತಂಡದ ಸದಸ್ಯೆಯಾಗಿದ್ದರು. ವಿವಿಧ ಜೈವಿಕ ಮತ್ತು ಭೌತಿಕ ಪ್ರಕ್ರಿಯೆಗಳ ಮೇಲೆ ಮೈಕ್ರೋಗ್ರಾವಿಟಿಯಿಂದಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡುವುದು ಆ ಯಾನದ ಪ್ರಮುಖ ಉದ್ದೇಶವಾಗಿತ್ತು.
ಅಚ್ಚಳಿಯದ ಸಾಧನೆಗೈದ ತಾರೆ
- 1994 ರಲ್ಲಿ ನಾಸಾಕ್ಕೆ ಸೇರ್ಪಡೆಗೊಂಡು ಮಿಷನ್ ಸ್ಪೆಷಲಿಸ್ಟ್ ಮತ್ತು ರೋಬೋಟಿಕ್ ಆರ್ಮ್ ಆಪರೇಟರ್ ಆಗಿ ಕಾರ್ಯನಿರ್ವಹಿಸಿದರು.
- STS-87 (1997) ಮತ್ತು STS-107 (2003) ಎಂಬ ಎರಡು ಯಾನಗಳಲ್ಲಿ ಅಂತರಿಕ್ಷಕ್ಕೆ ಹಾರಿದರು.
- ಸ್ಪೇಸ್ ಶಟಲ್ ಸಿಸ್ಟಮ್ ವಿಮಾನ ಯಾನ ಉದ್ದೀಪನ ಮತ್ತು ವಿಮಾನದ ವೈವಿಧ್ಯಮಯ ಪ್ರಕ್ರಿಯೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು.
- ಮೈಕ್ರೋಗ್ರಾವಿಟಿ, ಜೀವಶಾಸ್ತ್ರ ಮತ್ತು ಭೌತಿಕ ವಿಜ್ಞಾನ ಕುರಿತು ಮಹತ್ವಪೂರ್ಣ ಪ್ರಯೋಗಗಳನ್ನು ನಡೆಸಿದ್ದರು.
- ಇವರಿಗೆ ಕಾಂಗ್ರೆಸ್ಸನಲ್ ಸ್ಪೇಸ್ ಮೆಡಲ್ ಆಫ್ ಹಾನರ್, ನಾಸಾ ಸ್ಪೇಸ್ ಫ್ಲೈಟ್ ಮೆಡಲ್ ಮತ್ತು ಇತರ ಅನೇಕ ಪ್ರಶಸ್ತಿಗಳು ದೊರೆತಿವೆ.
- ಧೈರ್ಯ ಮತ್ತು ಪರಿಶ್ರಮದ ಸಂಕೇತವಾಗಿ, ವಿಶೇಷವಾಗಿ ಮಹಿಳೆಯರಿಗೆ STEM ಕ್ಷೇತ್ರಗಳಲ್ಲಿ ಪ್ರೇರಣೆಯಾದರು.
ಅವರ ಹೆಸರಿನಲ್ಲಿ ಅನೇಕ ಸಂಸ್ಥೆಗಳು, ಸ್ಮಾರಕಗಳು ಮತ್ತು ದತ್ತಿನಿಧಿಗಳನ್ನು ಸ್ಥಾಪಿಸಲಾಗಿದೆ. ಕಲ್ಪನಾ ಚಾವ್ಲಾ ಸ್ಮಾರಕ ತಾರಾಲಯವು ಪ್ರಸಿದ್ಧವಾಗಿದೆ. ಕಲ್ಪನಾ ಅವರ ಜನ್ಮಸ್ಥಳವಾದ ಹರಿಯಾಣದ ಕರ್ನಾಲ್ ಎಂಬಲ್ಲಿ ಕಲ್ಪನಾ ಚಾವ್ಲಾ ಸ್ಮಾರಕ ತಾರಾಲಯವನ್ನು ನಿರ್ಮಿಸಲಾಗಿದ್ದು, ಭೇಟಿಕೊಟ್ಟ ಪ್ರೇಕ್ಷಕರಿಗೆ, ಕಲ್ಪನಾ ಚಾವ್ಲಾ ಅವರ ಮೈನವಿರೇಳಿಸುವ ಯಶೋಗಾಥೆಯ ಬಗ್ಗೆ ತಿಳಿಯುವುದಂತೂ ಖಚಿತ.
ಕಲ್ಪನಾ ಚಾವ್ಲಾ ಅವರ ಬಾಹ್ಯಾಕಾಶ ಅನ್ವೇಷಣೆಗೆ ಸಲ್ಲಿಸಿದ ಅಪೂರ್ವ ಕೊಡುಗೆಗಾಗಿ 1999 ರಲ್ಲಿ ಪದ್ಮಶ್ರೀ ಪ್ರಶಸ್ತಿ, 2003 ರಲ್ಲಿ ರಾಷ್ಟ್ರ ಪ್ರಶಸ್ತಿ ಮತ್ತು 2004 ರಲ್ಲಿ ಮರಣೋತ್ತರ ಪದ್ಮಭೂಷಣ ಪ್ರಶಸ್ತಿಗಳು ಲಭಿಸಿವೆ. ಅವರ ಹೆಸರಿನಲ್ಲಿ ಹರಿಯಾಣ ಸರಕಾರವು “ಕಲ್ಪನಾ ಚಾವ್ಲಾ ಸ್ಮಾರಕ ಪ್ರಶಸ್ತಿ” ಯನ್ನು ಸ್ಥಾಪಿಸಿದ್ದು, ಬಾಹ್ಯಾಕಾಶ ಮತ್ತು ಅದಕ್ಕೆ ಸಂಬಂಧಿಸಿದ ಇತರ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡುವ ಯುವ ಮತ್ತು ಮಹಿಳಾ ಸಾಧಕರಿಗೆ ಇದನ್ನು ಕೊಡಲಾಗುತ್ತದೆ. ಪ್ರತಿ ವರ್ಷ ಕಲ್ಪನಾ ಚಾವ್ಲಾ ಅವರ ಜನ್ಮದಿನ ಮಾರ್ಚ್ 17 ರಂದು ಅಥವಾ ಫೆಬ್ರವರಿ 1 ರಂದು ಇದನ್ನು ಸಾಧಕರಿಗೆ ನೀಡಿ ಗೌರವಿಸಲಾಗುತ್ತದೆ.