![](https://newsroomfirst.com/wp-content/uploads/2025/01/1000143725.png)
![](https://newsroomfirst.com/wp-content/uploads/2025/01/image-9.png)
2025 ರ ಜನವರಿ 26 ಕ್ಕೆ ನಮ್ಮ ದೇಶದ ಸಂವಿಧಾನವು ಜಾರಿಗೆ ತಂದು 75 ವರ್ಷಗಳಾಗುತ್ತವೆ. ನಮ್ಮ ದೇಶವನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗುವುದಕ್ಕಾಗಿ ರಚಿಸಿದ ಸಂವಿಧಾನಕ್ಕೆ ಅಮೃತ ಮಹೋತ್ಸವದ ಸಂಭ್ರಮ. ಈ ವಿಶೇಷ ಹಬ್ಬವನ್ನು ಆಚರಿಸಲು ದೇಶಾದ್ಯಂತ ಹಲವಾರು ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಈ ಕಾರ್ಯಕ್ರಮಗಳು ದೇಶದ ನಾಗರಿಕರಿಗೆ ಭಾಗವಹಿಸುವ, ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಅದರ ಮೌಲ್ಯಗಳನ್ನು ಗೌರವಿಸುವ ಅವಕಾಶವನ್ನು ಕಲ್ಪಿಸುತ್ತಿದೆ.
ಕಳೆದ ನವಂಬರ್ 26 ರಂದು ಈ ಹಬ್ಬಕ್ಕೆ ಚಾಲನೆಯನ್ನು ಕೊಡಲಾಗಿದ್ದು, 2025 ರ ನವಂಬರ್ 26 ರವರೆಗೆ ಆಚರಿಸಲಾಗುತ್ತದೆ. ಭಾರತೀಯ ಸಂವಿಧಾನದ ಮಹತ್ವ ಮತ್ತು ಅದು ಭಾರತ ದೇಶದ ಪ್ರಜಾತಂತ್ರಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಸಾರ್ವಜನಿಕ ಸಮಾರಂಭಗಳು, ಉಪನ್ಯಾಸಗಳು ಮತ್ತು ಚರ್ಚೆಗಳು ನಡೆಯುತ್ತಿವೆ.
2024 ರ ನವಂಬರ್ 26 ರಂದು 75 ನೇ ವರ್ಷದ ಭಾರತೀಯ ಸಂವಿಧಾನದ ಪೀಠಿಕೆ ದಿನವನ್ನು ಆಚರಿಸಲಾಗಿದೆ. ಶಾಲೆ, ವಿಶ್ವ ವಿದ್ಯಾಲಯಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಸಂವಿಧಾನದ ಪೀಠಿಕೆ ದಿನವನ್ನು ಆಚರಿಸಲಾಗಿದೆ. ದೇಶಾದ್ಯಂತ ಈ ಕುರಿತು ಅನೇಕ ಉಪನ್ಯಾಸ ಕಾರ್ಯಕ್ರಮಗಳು ನಡೆಯುತ್ತಿದ್ದು, ದೇಶದ ಪ್ರಜೆಗಳಿಗೆ ಸಂವಿಧಾನದ ಮಹತ್ವ, ಅದರ ಹಿಂದಿನ ಪರಿಶ್ರಮ, ದೇಶದ ಪ್ರಗತಿಯಲ್ಲಿ ಅದರ ಪಾತ್ರದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಯುವ ವೃಂದಗಳು, ಚಿಂತಕರ ನಡುವೆ ಚರ್ಚಾಕೂಟವನ್ನು ಆಯೋಜಿಸಿ, ಪ್ರಜೆಗಳನ್ನು ಎಚ್ಚರಿಸುವ ಕಾರ್ಯಕ್ರಮಗಳು ನಡೆಯುತ್ತಿವೆ.
ಜಗತ್ಪ್ರಸಿದ್ಧ ಮಹಾಕುಂಭಮೇಳದಲ್ಲಿಯೂ ಸಂವಿಧಾನದ ಝಲಕ್; ಜನರ ಮನ ಸೆಳೆದ ಸಂವಿಧಾನ ಗ್ಯಾಲರಿ;
![](https://newsroomfirst.com/wp-content/uploads/2025/01/image-10.png)
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಜಗತ್ಪ್ರಸಿದ್ಧ ಮಹಾಕುಂಭ ಮೇಳದಲ್ಲಿ ಸಂವಿಧಾನ ಸಭೆಯಲ್ಲಿ ಪಾಲ್ಗೊಂಡ ಪ್ರಮುಖ ವ್ಯಕ್ತಿಗಳ ಭಾವಚಿತ್ರಗಳು ಮತ್ತು ಸಂವಿಧಾನ ರಚನಾ ಪ್ರಕ್ರಿಯೆಯ ಡಾಕ್ಯುಮೆಂಟರಿಗಳನ್ನು ಪ್ರದರ್ಶಿಸುವ ಒಂದು ಸಂವಿಧಾನ ಗ್ಯಾಲರಿ ಸಿದ್ಧಪಡಿಸಲಾಗಿದೆ. ಇದನ್ನು 2025ರ ಜನವರಿ 16ರಂದು ಉತ್ತರ ಪ್ರದೇಶದ ಹಣಕಾಸು ಸಚಿವರಾದ ಶ್ರೀ ಸುರೇಶ್ ಖನ್ನಾ ಅವರು ಉದ್ಘಾಟಿಸಿದರು. ಈ ಗ್ಯಾಲರಿ, ಮೇಳದ 2ನೇ ವಿಭಾಗದ ತ್ರಿವೇಣಿ ಮಾರ್ಗದಲ್ಲಿ ನಿರ್ಮಾಣವಾಗಿದ್ದು, ರಾಜ್ಯ ಸಂಸತ್ತೀಯ ವ್ಯವಹಾರಗಳು ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಪ್ರಸ್ತುತವಾಗಿದೆ. ಭಾರತದ ಸಂವಿಧಾನದ ಮಹತ್ವ ಮತ್ತು ಮೌಲ್ಯಗಳ ಬಗ್ಗೆ ಜನತೆಗೆ ಅರಿವು ಮೂಡಿಸುವುದು ಈ ಆಯೋಜನೆಯ ಮುಖ್ಯ ಉದ್ದೇಶ.
ಈ ಗ್ಯಾಲರಿಯ ವೈಶಿಷ್ಟ್ಯಗಳೆಂದರೆ,
ಪ್ರದರ್ಶನಗಳು: ಸಂವಿಧಾನ ಸಭೆಯ ರಚನೆ ಮತ್ತು ಸಂವಿಧಾನ ರಚನಾ ಪ್ರಕ್ರಿಯೆಯನ್ನು ದೃಶ್ಯ ಮತ್ತು ಧ್ವನಿ ಮಾಧ್ಯಮಗಳ ಮೂಲಕ ವಿವರಿಸಲಾಗಿದೆ.
ಡಾಕ್ಯುಮೆಂಟರಿಗಳು: ಸಂವಿಧಾನ ಸಭೆಯಲ್ಲಿ ಪ್ರಮುಖ ಪಾತ್ರವಹಿಸಿದ ಮಹಾನ್ ವ್ಯಕ್ತಿಗಳನ್ನು ಮತ್ತು ಅವರ ಸ್ಮರಣೀಯ ಭಾಷಣಗಳನ್ನು ತೋರಿಸುತ್ತವೆ.
ಗ್ರಂಥಾಲಯ: ಇಲ್ಲಿ ಭಾರತದ ಸಂವಿಧಾನಕ್ಕೆ ಸಂಬಂಧಿಸಿದ ಗ್ರಂಥಗಳು ಮತ್ತು ಪಠ್ಯಗಳಿವೆ.
ಮಹಾಕುಂಭಮೇಳಕ್ಕೆ ಬರುವ ಪ್ರವಾಸಿಗರಿಗೆ ಸಂವಿಧಾನ ರಚನೆಗೆ ಕಾರಣಕರ್ತರಾದ ಮಹಾನ್‌ವ್ಯಕ್ತಿಗಳ ಮೂರ್ತಿಗಳ ಜೊತೆ ಫೋಟೋ ತೆಗೆಸಿಕೊಳ್ಳುವುದಕ್ಕಾಗಿ ಅನೇಕ ಸೆಲ್ಫಿ ಕಾರ್ನರ್‌ಗಳನ್ನು ಸಿದ್ಧಪಡಿಸಲಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗ್ಯಾಲರಿಯನ್ನು ವೀಕ್ಷಿಸುವ ಸಂದರ್ಭದಲ್ಲಿ, “ಯುವ ಪೀಳಿಗೆಗೆ ಸಂವಿಧಾನದ ಮಹತ್ವವನ್ನು ತಿಳಿಸುವಲ್ಲಿ ಇದರ ಪಾತ್ರ ಮಹತ್ತರವಾಗಿದೆ. ಇದರಿಂದ ರಾಷ್ಟ್ರೀಯ ಏಕತೆಯು ಬಲವಾಗಿ, ಸಂವಿಧಾನದ ಶ್ರೇಷ್ಠತೆಯು ಇನ್ನೂ ಹೆಚ್ಚಾಗುತ್ತದೆ “ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಂವಿಧಾನ ಗ್ಯಾಲರಿ ಮಹಾ ಕುಂಭಮೇಳಕ್ಕೆ ಹಾಜರಾಗುವ ಭಕ್ತರಿಗೆ ಪ್ರಮುಖ ಆಕರ್ಷಣೆಯಾಗಿದ್ದು, ಭಾರತದ ಸಂವಿಧಾನದ ಇತಿಹಾಸ ಮತ್ತು ಮೌಲ್ಯಗಳನ್ನು ಆಳವಾಗಿ ತಿಳಿದುಕೊಳ್ಳುವ ಅಪರೂಪದ ಅವಕಾಶವನ್ನು ಒದಗಿಸುತ್ತದೆ.