ಕಲ್ಲಿದ್ದಲು – ಆಧಾರಿತ ವಿದ್ಯುತ್ ಸ್ಥಾವರಗಳ ಕುರಿತು ಭಾರತದ ಸರಕಾರದ ಮಹತ್ವದ ನಿರ್ಧಾರ; ಕಲ್ಲಿದ್ದಲು ಆಧಾರಿತ ಕಂಪನಿಗಳು 100% ಕಾರ್ಯೋನ್ಮುಖರಾಗಬೇಕು;
ನವದೆಹಲಿ: ಭಾರತ ಸರಕಾರವು 2025 ರ ಫೆಬ್ರವರಿ 28 ರವರೆಗೆ ಕಲ್ಲಿದ್ದಲು – ಆಧಾರಿತ ವಿದ್ಯುತ್ ಸ್ಥಾವರಗಳನ್ನು ಪೂರ್ಣ- ಪ್ರಮಾಣದಲ್ಲಿ ಕಾರ್ಯನಿರ್ವಹಿಸುವಂತೆ ಆದೇಶವನ್ನು ಹೊರಡಿಸಿದೆ. ಸೆಕ್ಷನ್ 11, ವಿದ್ಯುತ್ ಕಾಯ್ದೆ 2003 ಅಡಿಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ. ವಿದ್ಯುತ್ ಬೇಡಿಕೆ ಮತ್ತು ಪೂರೈಕೆಯಲ್ಲಿನ ಅಂತರವನ್ನು ತಪ್ಪಿಸಲು ಮತ್ತು ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವುದಕ್ಕಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಕಾಯ್ದೆಯು ಸರಕಾರಕ್ಕೆ ತುರ್ತು ಪರಿಸ್ಥಿತಿಗಳಲ್ಲಿ ವಿದ್ಯುತ್ ಸ್ಥಾವರಗಳ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುವ ಹಕ್ಕನ್ನು ನೀಡುತ್ತದೆ. ಟಾಟಾ ಪವರ್, ಅದಾನಿ ಪವರ್, ಮತ್ತು ವೇದಾಂತ ದಂತಹ ಕಂಪನಿ ಗಳಿಗೆ ಈ ಆದೇಶ ಅನ್ವಯವಾಗುತ್ತದೆ.
ಈ ಆದೇಶದ ಪ್ರಕಾರ, ಆಮದು ಮಾಡಲಾದ ಕಲ್ಲಿದ್ದಲಿನಿಂದ ವಿದ್ಯುತ್ ಉತ್ಪಾದಿಸುವ ಎಲ್ಲಾ ಸ್ಥಾವರಗಳು ತಮ್ಮ ಉತ್ಪಾದನಾ ಸಾಮರ್ಥ್ಯದ ಶೇ.100 ರಷ್ಟು ಕಾರ್ಯನಿರ್ವಹಿಸಬೇಕು.
ಕಾಲಾವಧಿ ವಿಸ್ತರಣೆ: ಈ ಆದೇಶವನ್ನು ಮೊದಲಿಗೆ ಡಿಸೆಂಬರ್ 31, 2024ರವರೆಗೆ ಎಂದು ನೀಡಲಾಗಿತ್ತು, ಆದರೆ ಈಗ ಫೆಬ್ರವರಿ 28, 2025ರವರೆಗೆ ವಿಸ್ತರಿಸಲಾಗಿದೆ. ದೇಶದ ವಿದ್ಯುತ್ ಬೇಡಿಕೆ ಮತ್ತು ಪೂರೈಕೆಯ ನಡುವೆ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮತ್ತು ಜನರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಸದುದ್ದೇಶದಿಂದ ಸರಕಾರ ಈ ನಿರ್ಧಾರವನ್ನು ಕೈಗೊಂಡಿದೆ.
ಕಂಪನಿಗಳು ತಮ್ಮ ಉತ್ಪಾದನಾ ಯೋಜನೆಗಳನ್ನು ಪುನರಚಿಸಿಕೊಂಡು, ಕಾರ್ಯೋನ್ಮುಖರಾಗಬೇಕಾಗುತ್ತದೆ. ಕಲ್ಲಿದ್ದಲಿನ ಆಮದು ಸರಪಳಿಯನ್ನು ಸುಧಾರಿಸಿಕೊಂಡು, ಹೆಚ್ಚಿನ ಕಲ್ಲಿದ್ದಲು ಪೂರೈಕೆಯನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಇದರಿಂದ ಹೆಚ್ಚಿನ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯಾಗಿ, ದೇಶಾದ್ಯಂತ ಬೇಕಾದ ಶಕ್ತಿ ಪೂರೈಕೆಯಾಗುತ್ತದೆ. ಈ ನಿಯಮಗಳು ಎಲ್ಲಾ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಅನ್ವಯಿಸುತ್ತದೆ. ಕಂಪನಿಗಳು ಈ ಕಾಯ್ದೆಯನ್ನು ಉಲ್ಲಂಘಿಸುವಂತಿಲ್ಲ. ಉಲ್ಲಂಘಿಸಿದಲ್ಲಿ, ಕಾನೂನು ರೀತಿಯ ಪ್ರಕ್ರಿಯೆಗಳನ್ನು ಎದುರಿಸಬೇಕಾಗಬಹುದು.
- ಭಾರತೀಯ ಕಂಪನಿಗಳು ಈಗಾಗಲೇ ಆಸ್ಟ್ರೇಲಿಯಾ, ಇಂಡೋನೇಶಿಯಾ, ದಕ್ಷಿಣ ಆಫ್ರಿಕಾ ಮುಂತಾದ ದೇಶಗಳ ಗಣಿ ಆಧಾರಿತ ಕಂಪನಿಗಳೊಂದಿಗೆ ಮಾಡಿಕೊಂಡಿರುವ ದೀರ್ಘಾವಧಿಯ ಆಮದು ಒಪ್ಪಂದಗಳನ್ನು ನವೀಕರಿಸುವ ಅಥವಾ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸುವ ಪ್ರಯತ್ನವನ್ನು ಮಾಡಬಹುದು ಅಥವಾ ತಾತ್ಕಾಲಿಕ ಬೇಡಿಕೆಗಳನ್ನು ಪೂರೈಸುವುದಕ್ಕಾಗಿ, ಅಲ್ಪಾವಧಿ ಆಮದು ಒಪ್ಪಂದಗಳನ್ನು ಮಾಡಿಕೊಳ್ಳಬಹುದು. ಇಂಡೋನೇಶಿಯಾ ಭಾರತಕ್ಕೆ ಪ್ರಮುಖ ಕಲ್ಲಿದ್ದಲು ಪೂರೈಕೆ ಮಾಡುವ ದೇಶ. ಇಲ್ಲಿಂದ ಕಲ್ಲಿದ್ದಲನ್ನು ಕಡಿಮೆ ದರದಲ್ಲಿ ಆಮದು ಮಾಡಿಕೊಳ್ಳಬಹುದು.
- ಕಲ್ಲಿದ್ದಲು ಸಾಗಾಟವನ್ನು ಸುಗಮಗೊಳಿಸುವುದಕ್ಕೆ ಕಂಪನಿಗಳು ಬಂದರುಗಳಲ್ಲಿ, ಕಲ್ಲಿದ್ದಲು ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ರೈಲು ಮಾರ್ಗಗಳನ್ನು ಬಳಸಬಹುದು.
- ಜಾಗತಿಕ ಮಟ್ಟದಲ್ಲಿ ಕಲ್ಲಿದ್ದಲಿನ ಬೆಲೆ ಏರಿಕೆಯಾಗಿರುವ ಕಾರಣ, ಬೆಲೆಯನ್ನು ಕಡಿಮೆ ಮಾಡುವುದಕ್ಕಾಗಿ, ಡಿಸ್ಕೌಂಟ್ ಅಥವಾ ಬಲ್ಕ್ ಆರ್ಡರ್ ಮೊರೆ ಹೋಗಬಹುದು.
- ಕಡಿಮೆ ಕಲ್ಲಿದ್ದಲನ್ನು ಬಳಸಿ, ಹೆಚ್ಚು ಶಕ್ತಿ ಉತ್ಪಾದಿಸುವ ಉದ್ದೇಶದಿಂದ, ಶ್ರೇಷ್ಠ ತಂತ್ರಜ್ಞಾನಗಳನ್ನು ಬಳಸಬಹುದು.
- ಸರಕಾರವು ಈ ಕಂಪನಿಗಳಿಗೆ ಕೋಲ್ ಆಮದು ಸುಗಮಗೊಳಿಸಲು ವಿವಿಧ ನಿರ್ಬಂಧಗಳನ್ನು ಕಡಿಮೆ ಮಾಡಬಹುದು.
- ಸರಕಾರವು ಕಂಪನಿಗಳಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಸಬ್ಸಿಡಿಗಳನ್ನು ಒದಗಿಸುವ ಸಾಧ್ಯತೆ ಇದೆ.
ಭಾರತ ಈಗ ಸೌರಶಕ್ತಿ ಮತ್ತು ನವೀಕೃತ ಶಕ್ತಿಯ ಮೇಲೆ ಹೆಚ್ಚಿನ ಹೂಡಿಕೆ ಮಾಡುತ್ತಿದೆ. ಆದರೆ ತಕ್ಷಣದ ಶಕ್ತಿ ಕೊರತೆಯನ್ನು ಪೂರೈಸಲು ಕಲ್ಲಿದ್ದಲು ಹೆಚ್ಚು ಉಪಯುಕ್ತವಾಗಿದೆ. ಇದು ತಾತ್ಕಾಲಿಕ ಪರಿಹಾರವಾಗಿದ್ದು, ದೀರ್ಘಾವಧಿಯಲ್ಲಿ ಭಾರತವು ನವೀಕೃತ ಶಕ್ತಿಯ ಕಡೆಗೆ ಹೆಚ್ಚಿನ ಹೂಡಿಕೆ ಮಾಡುವ ಸಾಧ್ಯತೆ ಇದೆ.