ರಾಷ್ಟ್ರೀಯ

100ನೇ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿದ ಇಸ್ರೋ; ಗಗನಕ್ಕೆ ಹಾರಿತು NVS-02 ಉಪಗ್ರಹವನ್ನು ಹೊತ್ತ GSLV-F15 ಬಾಹ್ಯಾಕಾಶ ನೌಕೆ;

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ತನ್ನ 100ನೇ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾಯಿಸಿ, ಮಹತ್ವದ ಮೈಲಿಗಲ್ಲು ತಲುಪಿದೆ. ಜಿಯೋಸಿಂಕ್ರೊನಸ್ ಸ್ಯಾಟಲೈಟ್ ಲಾಂಚ್ ವೈಕಲ್ (GSLV-F15) ಯಶಸ್ವಿಯಾಗಿ ಭಾರತೀಯ ಕಾಲಮಾನ ಬೆಳಿಗ್ಗೆ 6:23 ಕ್ಕೆ ಉಡಾಯಿಸಿತು. ಇದು NVS-02 ಉಪಗ್ರಹವನ್ನು ಭೂಸ್ಥಿರ ವರ್ಗಾಂತರ ಕಕ್ಷೆಗೆ (Geostationary Transfer Orbit) ಕಳುಹಿಸಿದೆ.

NVS-02 ಉಪಗ್ರಹವು ಭಾರತದ NavIC (Navigation with Indian Constellation) ವ್ಯವಸ್ಥೆಯ ಭಾಗವಾಗಿದ್ದು, ದೇಶಾದ್ಯಂತ ಮತ್ತು ದೇಶದ ಗಡಿಯಿಂದಾಚೆಗೆ ಸುಮಾರು 1,500 ಕಿಮೀ ವರೆಗೆ ನಿಖರವಾದ ಸ್ಥಳ, ವೇಗ, ಮತ್ತು ಸಮಯ (PVT – Position, Velocity, Timing) ಸೇವೆಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಈ ಉಡಾವಣೆ ನಿಖರ ನ್ಯಾವಿಗೇಷನ್ ಸೇವೆಗಳನ್ನು ಒದಗಿಸಲು ಮತ್ತು ಇಸ್ರೋ ನ ಪ್ರಾದೇಶಿಕ ನಾವಿಗೇಷನ್ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲು ಸಹಾಯ ಮಾಡುತ್ತದೆ.

ಈ ಮಿಷನ್ 2025 ರ ಇಸ್ರೋನ ಮೊದಲ ಉಡಾವಣೆ ಆಗಿದ್ದು, ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನವನ್ನು ಇನ್ನಷ್ಟು ಬಲಪಡಿಸುವತ್ತ ಸಂಸ್ಥೆಯ ಬದ್ಧತೆಯನ್ನು ಸಾರುತ್ತದೆ.  NVS-02 ಉಪಗ್ರಹದ ಯಶಸ್ವಿ ನಿಯೋಜನೆಯು NavIC ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತದೆ, ಇದು ನಾವಿಗೇಷನ್, ನಿಖರ ಕೃಷಿ, ತುರ್ತು ಪ್ರತಿಕ್ರಿಯೆ ಸೇವೆಗಳಿಗೆ ಮಹತ್ವದ ಸಹಾಯವನ್ನು ಒದಗಿಸುತ್ತದೆ.

GSLV-F15 ಮೂಲಕ ಉಡಾಯಿಸಲಾದ NVS-02 ಉಪಗ್ರಹವನ್ನು ಮೊದಲಿಗೆ ಜಿಯೋಸ್ಟೇಶನರಿ ಟ್ರಾನ್ಸ್‌ಫರ್ ಆರ್ಬಿಟ್ ಗೆ ತಲುಪಿಸಲಾಗುತ್ತದೆ. ಅಲ್ಲಿಂದ, ಅದು ಕೆಲವು ದಿನಗಳಲ್ಲಿ ತನ್ನ ಅಂತಿಮ ಜಿಯೋಸ್ಟೇಶನರಿ ಆರ್ಬಿಟ್‌ಗೆ ತಲುಪುತ್ತದೆ. ಈ ಕಕ್ಷೆಯು ಭೂಮಿಯಿಂದ 35,786 ಕಿಮೀ ದೂರದಲ್ಲಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಸಾಮಾನ್ಯವಾಗಿ ಕೆಲವು ದಿನಗಳಿಂದ ಎರಡು ವಾರಗಳು ಬೇಕಾಗಬಹುದು.

ಯಶಸ್ವಿ ಉಪಗ್ರಹ ಉಡಾವಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿ. ಮಾಧವನ್

ಯಶಸ್ವಿ ಉಪಗ್ರಹ ಉಡಾವಣೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇಸ್ರೋನ ಪ್ರಸ್ತುತ ಅಧ್ಯಕ್ಷರಾದ ಡಾ|| ವಿ. ನಾರಾಯಣನ್ ಅವರು “ಇಸ್ರೋ ಪ್ರಾರಂಭವಾದದ್ದು 1962 ರಲ್ಲಿ. 63 ವರ್ಷಗಳ ಈ ಸುದೀರ್ಘ ಪಯಣದಲ್ಲಿ, ನಾವು ಸಾಕಷ್ಟು ಬೆಳವಣಿಗೆಯನ್ನು ಕಂಡಿದ್ದೇವೆ. ಈ ಯಶಸ್ಸು ಈ ಸಂಸ್ಥೆಯಲ್ಲಿ ದುಡಿದ ಪ್ರತಿಯೊಬ್ಬ ವಿಜ್ಞಾನಿಗೂ ಸಲ್ಲುತ್ತದೆ. ಇದರ ಹಿಂದೆ ಇದಕ್ಕೂ ಮುನ್ನ ದುಡಿದ, ಈ ಸಂಸ್ಥೆಯ ಅಭಿವೃದ್ಧಿಗಾಗಿ ಶ್ರಮಿಸಿದ ಪ್ರತಿಯೊಬ್ಬ ಅಧ್ಯಕ್ಷರಿಗೂ ಸಲ್ಲುತ್ತದೆ” ಎಂದಿದ್ದಾರೆ. ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ ಮಾತು ಮುಂದುವರಿಸಿದ ನಾರಾಯಣನ್, “ಪ್ರಧಾನ ಮಂತ್ರಿಗಳು ನಮಗೆ ಮುಂದಿನ 40 ವರ್ಷಗಳ ವರೆಗೆ ಏನೇನು ಮಾಡಬೇಕೆಂಬ ಮಾರ್ಗದರ್ಶನವನ್ನು ಈ ಮೊದಲೇ ನೀಡಿದ್ದಾರೆ. ಅವರ  ಪ್ರೋತ್ಸಾಹವು ನಮ್ಮಲ್ಲಿ ಹೊಸತನ್ನು ಮಾಡುವ ಹುಮ್ಮಸ್ಸನ್ನು ನೀಡುತ್ತಿದೆ” ಎಂದು ಹೇಳಿದ್ದಾರೆ.

Leave a Response

error: Content is protected !!