ನೆದರ್ಲ್ಯಾಂಡ್ನ ಅಸೆನ್ ನಲ್ಲಿರುವ ಡ್ರೆಂಟ್ಸ್ ಮ್ಯೂಸಿಯಂನಲ್ಲಿ ಕಳ್ಳತನ; 2,450 ವರ್ಷ ಹಳೆಯದಾದ ಕೋಟೋಫೆನೆಸ್ಟಿಯ ಚಿನ್ನದ ಹೆಲ್ಮೆಟ್ ಕಳವು;
2025ರ ಜನವರಿ 27, ಸೋಮವಾರ ಬೆಳಗಿನ ವೇಳೆ, ನೆದರ್ಲ್ಯಾಂಡ್‌ನ ಅಸೆನ್ ನಲ್ಲಿರುವ ಡ್ರೆಂಟ್ಸ್ ಮ್ಯೂಸಿಯಂಗೆ ಚಾಲಾಕಿ ಕಳ್ಳರ ತಂಡವೊಂದು ನುಗ್ಗಿದೆ. ಬಾಂಬ್ ಬಳಸಿ, ಮ್ಯೂಸಿಯಂ ಬಾಗಿಲನ್ನು ಮುರಿದಿರುವ ಕಳ್ಳರು ರೋಮೇನಿಯಾದ ರಾಷ್ಟ್ರೀಯ ಐತಿಹಾಸಿಕ ಮ್ಯೂಸಿಯಮ್‌ನಿಂದ ಇತ್ತೀಚೆಗೆ ಬಂದಿದ್ದ ಡೇಸಿಯನ್ ನಾಗರಿಕತೆಯ ಪುರಾತನ ಕಲಾಕೃತಿಗಳ ಕಳ್ಳತನ ಮಾಡುವ ಉದ್ದೇಶವನ್ನಿಟ್ಟುಕೊಂಡಿದ್ದರು. ಕಳ್ಳರು ಕೊಂಡೊಯ್ದ ವಸ್ತುಗಳಲ್ಲಿ 2,450 ವರ್ಷಗಳಷ್ಟು ಹಳೆಯದಾದ ಅಮೂಲ್ಯ ಕಲಾಕೃತಿಯಾದ ಕೋಟೋಫೆನೆಸ್ಟಿಯ ಚಿನ್ನದ ಹೆಲ್ಮೆಟ್ ಮತ್ತು ಮೂರು ಚಿನ್ನದ ಬ್ರಾಸ್ಲೇಟ್‌ಗಳು ಪ್ರಮುಖವಾದವುಗಳಾಗಿವೆ. ಇವೆಲ್ಲವೂ 4 ಅಥವಾ 5 ನೇ ಶತಮಾನದಷ್ಟು ಪುರಾತನ ವಸ್ತುಗಳಾಗಿವೆ.
ಕೋಟೋಫೆನೆಸ್ಟಿಯ ಚಿನ್ನದ ಹೆಲ್ಮೆಟ್ ಡೇಸಿಯನ್ ನಾಗರಿಕತೆಯ ಕುಶಲತೆಯನ್ನು ಪ್ರತಿಬಿಂಬಿಸುತ್ತದೆ. ಇದರ ಕಳ್ಳತನವು ಕಲೆ ಮತ್ತು ಇತಿಹಾಸ ಸಮುದಾಯಗಳಲ್ಲಿ ಆಘಾತವನ್ನುಂಟುಮಾಡಿದೆ. ಈ ಐತಿಹಾಸಿಕ ವಸ್ತುಗಳು ಶ್ರೇಷ್ಠವಾದ ಕಾರಣ, ಕಾಳಸಂತೆಯಲ್ಲಿ ಮಾರಾಟ ಮಾಡುವುದು ಅಷ್ಟೊಂದು ಸುಲಭದ ಮಾತಲ್ಲವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಹೆಲ್ಮೆಟ್ ಚಿನ್ನದ್ದಾಗಿರುವುದರಿಂದ ಅದನ್ನು ಕರಗಿಸಿ ಮಾರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅಂತರಾಷ್ಟ್ರೀಯ ಇಂಟಲಿಜೆಂಟ್ ಏಜೆಂಸಿಗಳ ಜೊತೆಗೂಡಿ, ಡಚ್ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿವೆ. ಮ್ಯೂಸಿಯಮ್ ಬಳಿ ಬೆಂಕಿಯಲ್ಲಿ ಸುಟ್ಟು ಕರಕಲಾದ ಕಾರ್ ಒಂದು ಪತ್ತೆಯಾಗಿದ್ದು, ಈ ಕಾರಿಗೂ ಹಾಗೂ ಕಳ್ಳತನಕ್ಕೂ ಸಂಬಂಧವಿರಬಹುದೆಂದು ಶಂಕಿಸಲಾಗಿದೆ. ಮ್ಯೂಸಿಯಮ್ ಮತ್ತು ಆಸುಪಾಸಿನ ಪ್ರದೇಶಗಳಲ್ಲಿನ ಸೆಕ್ಯುರಿಟಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಆದರೆ ಈವರೆಗೆ ಯಾವುದೇ ಆರೋಪಿಗಳನ್ನು ಬಂಧಿಸಿರುವ ಮಾಹಿತಿ ಲಭ್ಯವಿಲ್ಲ.
ಈ ಘಟನೆಯಿಂದ ರೋಮೇನಿಯಾದಲ್ಲಿ ದೊಡ್ಡ ಆಘಾತವನ್ನೇ ಸೃಷ್ಟಿಯಾಗಿದ್ದು, ರೋಮೇನಿಯಾದ ಅಧ್ಯಕ್ಷ ಕ್ಲಾಸ್ ಇಯೋಹಾನ್ನಿಸ್ ಸೇರಿದಂತೆ ಅನೇಕ ಅಧಿಕಾರಿಗಳು, ಇಂತಹ ಅಮೂಲ್ಯವಾದ ರಾಷ್ಟ್ರೀಯ ಆಭರಣಗಳ ಕಳವಿನ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಈ ಕಳ್ಳತನವು ಅಮೂಲ್ಯ ಐತಿಹಾಸಿಕ ವಸ್ತುಗಳನ್ನು ಅಂತರಾಷ್ಟ್ರೀಯ ಪ್ರದರ್ಶನಗಳಲ್ಲಿ ಪ್ರದರ್ಶಿಸುವುದಕ್ಕೆ ನೀಡುವುದರಿಂದಾಗುವ ಅಪಾಯಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.