ಸೋಲಿನ ಸುಳಿಯಲ್ಲಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಲಕ್ಕಿ ಸ್ಟಾರ್ ಆಗಿ ನ್ಯಾಟ್ ಸೈವರ್-ಬ್ರಂಟ್ ಮಿಂಚಿದ್ದಾರೆ. ವಡೋದರಾದ ಬಿ.ಸಿ.ಎ ಕ್ರೀಡಾಂಗಣದಲ್ಲಿ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ಬೆಂಗಳೂರು ತಂಡವನ್ನು ಮಣಿಸಿದ ಮುಂಬೈ, ಟೂರ್ನಿಯಲ್ಲಿ ಜೀವಂತಿಕೆ ಉಳಿಸಿಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್‌ಗೆ ಆರಂಭಿಕ ಆಘಾತ ಎದುರಾದರೂ, ಎರಡನೇ ವಿಕೆಟ್‌ಗೆ ಜೊತೆಯಾದ ಹೇಲಿ ಮ್ಯಾಥ್ಯೂಸ್ (56) ಮತ್ತು ನ್ಯಾಟ್ ಸೈವರ್-ಬ್ರಂಟ್ (100)* ಭರ್ಜರಿ 131 ರನ್‌ಗಳ ಜೊತೆಯಾಟವಾಡಿದರು. ಸೈವರ್-ಬ್ರಂಟ್ ಕೇವಲ 57 ಎಸೆತಗಳಲ್ಲಿ 16 ಬೌಂಡರಿ ಹಾಗೂ ಒಂದು ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ WPL ಇತಿಹಾಸದಲ್ಲೇ ಸೆಂಚುರಿ ಬಾರಿಸಿದ ಮೊದಲ ಆಟಗಾರ್ತಿ ಎಂಬ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದರು.
ಬೃಹತ್ ಗುರಿ ಬೆನ್ನಟ್ಟಿದ ಸ್ಮೃತಿ ಮಂಧಾನ ಪಡೆ ಪವರ್‌ಪ್ಲೇ ಅವಧಿಯಲ್ಲೇ 35 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಕಂಗೆಟ್ಟಿತ್ತು. ಆದರೆ, ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ (90) ಹೋರಾಡಿದರು. ಅಮನ್ ಜೋತ್ ಕೌರ್ ಅವರ ಓವರ್‌ನಲ್ಲಿ ಸತತ 3 ಸಿಕ್ಸರ್ ಸಿಡಿಸಿದ ರಿಚಾ, ಮುಂಬೈ ಪಾಳಯದಲ್ಲಿ ಆತಂಕ ಹುಟ್ಟಿಸಿದ್ದರು. ಆದರೆ ಅನುಭವಿ ಬೌಲರ್ ಅಮೆಲಿಯಾ ಕೆರ್ ಕೊನೆಯ ಓವರ್‌ನಲ್ಲಿ ರಿಚಾ ವಿಕೆಟ್ ಪಡೆಯುವ ಮೂಲಕ ಮುಂಬೈ 15 ರನ್‌ಗಳ ಜಯ ದಾಖಲಿಸಿತು.

