IND vs NZ 1st T20: ಅಬ್ಬರಿಸಿದ ಅಭಿಷೇಕ್ ಶರ್ಮಾ: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 48 ರನ್‌ಗಳ ಭರ್ಜರಿ ಜಯ

IND vs NZ 1st T20: ಅಬ್ಬರಿಸಿದ ಅಭಿಷೇಕ್ ಶರ್ಮಾ: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 48 ರನ್‌ಗಳ ಭರ್ಜರಿ ಜಯ

ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ಪ್ರದರ್ಶನದ ನೆರವಿನಿಂದ ಭಾರತ ತಂಡ, ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 48 ರನ್‌ಗಳ ಭವ್ಯ ಜಯ ದಾಖಲಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.

ಅಬ್ಬರಿಸಿದ ಅಭಿಷೇಕ್ ಶರ್ಮಾ, ರಿಂಕು ಸಿಂಗ್​ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಸಿಡಿಲಬ್ಬರದ ಆರಂಭ ನೀಡಿದರು. ಕೇವಲ 35 ಎಸೆತಗಳಲ್ಲಿ 84 ರನ್ ಚಚ್ಚಿದ ಅವರು ನ್ಯೂಜಿಲೆಂಡ್ ಬೌಲರ್‌ಗಳನ್ನು ಕಂಗೆಡಿಸಿದರು. ಇವರಿಗೆ ಸಾಥ್ ನೀಡಿದ ಸೂರ್ಯಕುಮಾರ್ ಯಾದವ್ (32) ಮತ್ತು ಹಾರ್ದಿಕ್ ಪಾಂಡ್ಯ (25) ರನ್ ಗತಿ ಹೆಚ್ಚಿಸಿದರು. ಅಂತ್ಯದಲ್ಲಿ ರಿಂಕು ಸಿಂಗ್ ಕೇವಲ 20 ಎಸೆತಗಳಲ್ಲಿ ಅಜೇಯ 44 ರನ್ ಸಿಡಿಸಿದ್ದರಿಂದ ಭಾರತ 238 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ಹೋರಾಡಿ ಸೋತ ಕಿವೀಸ್ ಬೃಹತ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡಕ್ಕೆ ಭಾರತೀಯ ಬೌಲರ್‌ಗಳು ಆರಂಭದಲ್ಲೇ ಪೆಟ್ಟು ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಫಿಲಿಪ್ಸ್ (78) ಮತ್ತು ಮಾರ್ಕ್ ಚಾಪ್ಮನ್ (39) ಪ್ರತಿರೋಧ ತೋರಿದರಾದರೂ ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ನಿಯಮಿತವಾಗಿ ವಿಕೆಟ್ ಕಳೆದುಕೊಂಡ ಕಿವೀಸ್ ಪಡೆ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಲಷ್ಟೇ ಶಕ್ತವಾಯಿತು.

ಅಂತರಾಷ್ಟ್ರೀಯ ಕ್ರೀಡೆ