ಉಡುಪಿ: ಶೀರೂರು ಶ್ರೀಗಳ ಪರ್ಯಾಯ ವೈಭವ; ಸರ್ವಜ್ಞ ಪೀಠಾರೋಹಣ ಮಾಡಿದ ಶ್ರೀ ವೇದವರ್ಧನ ತೀರ್ಥರು

ಉಡುಪಿ: ಶೀರೂರು ಶ್ರೀಗಳ ಪರ್ಯಾಯ ವೈಭವ; ಸರ್ವಜ್ಞ ಪೀಠಾರೋಹಣ ಮಾಡಿದ ಶ್ರೀ ವೇದವರ್ಧನ ತೀರ್ಥರು

ಉಡುಪಿ: ಕೃಷ್ಣನಗರಿ ಉಡುಪಿಯಲ್ಲಿ ದ್ವೈವಾರ್ಷಿಕ ಪರ್ಯಾಯ ಮಹೋತ್ಸವವು ಇಂದು (ಜನವರಿ 18) ಅತ್ಯಂತ ಸಂಭ್ರಮ ಮತ್ತು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರು ಐತಿಹಾಸಿಕ ‘ಸರ್ವಜ್ಞ ಪೀಠ’ವನ್ನು ಏರುವ ಮೂಲಕ ಮುಂದಿನ ಎರಡು ವರ್ಷಗಳ ಕಾಲ ಶ್ರೀಕೃಷ್ಣನ ಪೂಜಾ ಕೈಂಕರ್ಯದ ಜವಾಬ್ದಾರಿಯನ್ನು ವಹಿಸಿಕೊಂಡರು.

ದಂಡತೀರ್ಥ ಸ್ನಾನ ಹಾಗೂ ಪುರ ಪ್ರವೇಶ​ ಪರ್ಯಾಯ ವಿಧಿವಿಧಾನಗಳ ಅಂಗವಾಗಿ ಇಂದು ಮುಂಜಾನೆ 1:15ಕ್ಕೆ ಕಾಪು ಸಮೀಪದ ದಂಡತೀರ್ಥದಲ್ಲಿ ಶ್ರೀಗಳು ಪವಿತ್ರ ಸ್ನಾನ ಮಾಡಿದರು. ನಂತರ ಜೋಡುಕಟ್ಟೆಯಿಂದ ಭವ್ಯ ಮೆರವಣಿಗೆ ಆರಂಭವಾಯಿತು. ಸುಮಾರು 80ಕ್ಕೂ ಹೆಚ್ಚು ಕಲಾತಂಡಗಳು, ಸ್ತಬ್ಧಚಿತ್ರಗಳು ಮತ್ತು ಭಜನಾ ತಂಡಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು. ಅಷ್ಟಮಠಗಳ ಯತಿಗಳು ಪಲ್ಲಕ್ಕಿಯಲ್ಲಿ ಕುಳಿತು ರಥಬೀದಿಯ ಮೂಲಕ ಕೃಷ್ಣಮಠಕ್ಕೆ ಆಗಮಿಸಿದರು.

ಕನಕನ ಕಿಂಡಿ ದರ್ಶನ ಮತ್ತು ಅಧಿಕಾರ ಹಸ್ತಾಂತರ​ ರಥಬೀದಿಗೆ ಆಗಮಿಸಿದ ಶೀರೂರು ಶ್ರೀಗಳು ಶ್ರೀಚಂದ್ರಮೌಳೀಶ್ವರ ಮತ್ತು ಅನಂತೇಶ್ವರ ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ತದನಂತರ ಕೃಷ್ಣಮಠದ ಮುಖ್ಯದ್ವಾರದಲ್ಲಿರುವ ಕನಕನ ಕಿಂಡಿಯ ಮೂಲಕ ದೇವರ ದರ್ಶನ ಪಡೆದರು. ಮಠದ ಒಳಗೆ ನಿರ್ಗಮಿತ ಪರ್ಯಾಯ ಶ್ರೀಗಳಾದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು, ಶೀರೂರು ಶ್ರೀಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿ ‘ಅಕ್ಷಯ ಪಾತ್ರೆ’ ಮತ್ತು ‘ಸತ್ತಿಗೆ’ಯನ್ನು ಹಸ್ತಾಂತರಿಸಿದರು.

ಸರ್ವಜ್ಞ ಪೀಠಾರೋಹಣ ಬೆಳಗ್ಗೆ 5:55ಕ್ಕೆ ಸರಿಯಾಗಿ ಶ್ರೀ ವೇದವರ್ಧನ ತೀರ್ಥರು ಆಚಾರ್ಯ ಮಧ್ವರು ಸ್ಥಾಪಿಸಿದ ಸರ್ವಜ್ಞ ಪೀಠವನ್ನು ಏರಿದರು. ಇದರೊಂದಿಗೆ 2026-28ರ ಅವಧಿಗೆ ಶೀರೂರು ಮಠದ ಪರ್ಯಾಯ ಆಡಳಿತ ಆರಂಭವಾಯಿತು. 20 ವರ್ಷದ ಕಿರಿಯ ಪ್ರಾಯದ ಶ್ರೀಗಳು ಪೀಠವನ್ನೇರಿದ ಕ್ಷಣಕ್ಕೆ ಗಣ್ಯರು, ಸಾವಿರಾರು ಭಕ್ತರು ಸಾಕ್ಷಿಯಾದರು.

ಧಾರ್ಮಿಕ ರಾಜ್ಯ