ಇಸ್ರೋ ‘ಪಿಎಸ್‌ಎಲ್‌ವಿ-ಸಿ62’ ಮಿಷನ್ ವಿಫಲ: ಉಡಾವಣೆಯ ಮೂರನೇ ಹಂತದಲ್ಲಿ ತಾಂತ್ರಿಕ ವ್ಯತ್ಯಯ!

ಇಸ್ರೋ ‘ಪಿಎಸ್‌ಎಲ್‌ವಿ-ಸಿ62’ ಮಿಷನ್ ವಿಫಲ: ಉಡಾವಣೆಯ ಮೂರನೇ ಹಂತದಲ್ಲಿ ತಾಂತ್ರಿಕ ವ್ಯತ್ಯಯ!

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) 2026ರ ವರ್ಷದ ಆರಂಭದಲ್ಲೇ ಹಿನ್ನಡೆ ಅನುಭವಿಸಿದೆ. ಇಂದು ಬೆಳಿಗ್ಗೆ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಪಿಎಸ್‌ಎಲ್‌ವಿ-ಸಿ62 (PSLV-C62) ರಾಕೆಟ್‌ನ ಕಾರ್ಯಾಚರಣೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಮಿಷನ್ ಪೂರ್ಣಗೊಳ್ಳುವಲ್ಲಿ ವಿಫಲವಾಗಿದೆ.

ಸೋಮವಾರ ಬೆಳಿಗ್ಗೆ 10.18ಕ್ಕೆ ಭೂ ವೀಕ್ಷಣಾ ಉಪಗ್ರಹ ಹಾಗೂ ಇತರ ವಾಣಿಜ್ಯ ಉಪಗ್ರಹಗಳನ್ನು ಹೊತ್ತು 44.4 ಮೀಟರ್ ಎತ್ತರದ ಪಿಎಸ್‌ಎಲ್‌ವಿ ರಾಕೆಟ್ ಗಗನಕ್ಕೆ ಚಿಮ್ಮಿತು. ಮೊದಲ ಎರಡು ಹಂತಗಳು ಯಶಸ್ವಿಯಾಗಿ ಪೂರ್ಣಗೊಂಡರೂ, ಮೂರನೇ ಹಂತದ (PS3) ಅಂತ್ಯದಲ್ಲಿ ರಾಕೆಟ್‌ನ ಪಥದಲ್ಲಿ ಏರುಪೇರಾಯಿತು ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ತಿಳಿಸಿದ್ದಾರೆ.

ಮಿಷನ್ ಕಂಟ್ರೋಲ್ ಸೆಂಟರ್‌ನಲ್ಲಿ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಇಸ್ರೋ ಮುಖ್ಯಸ್ಥರು, “ಪಿಎಸ್‌ಎಲ್‌ವಿ ನಾಲ್ಕು ಹಂತದ ವಾಹನವಾಗಿದೆ. ಮೊದಲ ಎರಡು ಹಂತಗಳ ಕಾರ್ಯಕ್ಷಮತೆ ನಿರೀಕ್ಷಿತ ಮಟ್ಟದಲ್ಲಿತ್ತು. ಆದರೆ ಮೂರನೇ ಹಂತದ ಕೊನೆಯಲ್ಲಿ ವಾಹನದಲ್ಲಿ ಅತಿಯಾದ ಕಂಪನ ಅಥವಾ ವ್ಯತ್ಯಯಗಳು ಕಂಡುಬಂದವು. ಇದರಿಂದಾಗಿ ರಾಕೆಟ್ ತನ್ನ ನಿಗದಿತ ಪಥದಿಂದ ದಾರಿ ತಪ್ಪಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಇಸ್ರೋ ತನ್ನ ಅಧಿಕೃತ ‘X’ (ಟ್ವಿಟರ್) ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, “ಪಿಎಸ್‌ಎಲ್‌ವಿ-ಸಿ62 ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ. ದತ್ತಾಂಶಗಳ (Data Analysis) ಸಮಗ್ರ ವಿಶ್ಲೇಷಣೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ನೀಡಲಾಗುವುದು” ಎಂದು ತಿಳಿಸಿದೆ.

ಇದು ಇಸ್ರೋದ ವಾಣಿಜ್ಯ ವಿಭಾಗವಾದ ‘ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್’ (NSIL) ಅಡಿಯಲ್ಲಿ ಕೈಗೊಳ್ಳಲಾದ ಪ್ರಮುಖ ಯೋಜನೆಯಾಗಿತ್ತು. ಸದ್ಯಕ್ಕೆ ಈ ತಾಂತ್ರಿಕ ದೋಷಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತಜ್ಞರು ತನಿಖೆ ನಡೆಸುತ್ತಿದ್ದಾರೆ.

ತಂತ್ರಜ್ಞಾನ ರಾಷ್ಟ್ರೀಯ