ಹುಬ್ಬಳ್ಳಿ : ದೇಶಾದ್ಯಂತ ವಿಮಾನಗಳ ಹಾರಾಟದಲ್ಲಿ ಉಂಟಾದ ತೀವ್ರ ಅಸ್ತವ್ಯಸ್ತತೆಯು ಕರ್ನಾಟಕದ ನವದಂಪತಿಗೆ ದೊಡ್ಡ ಸಂಕಷ್ಟ ತಂದೊಡ್ಡಿದೆ. ಡಿಸೆಂಬರ್ 3 ರಂದು ಹುಬ್ಬಳ್ಳಿಯಲ್ಲಿ ನಡೆಯಬೇಕಿದ್ದ ತಮ್ಮದೇ ವಿವಾಹ ಆರತಕ್ಷತಿಗೆ ಮೇಘಾ ಕ್ಷೀರಸಾಗರ್ ಮತ್ತು ಸಂಗಮ್ ದಾಸ್ ಅವರು ಖುದ್ದಾಗಿ ಹಾಜರಾಗಲು ಸಾಧ್ಯವಾಗಲಿಲ್ಲ. ಬದಲಿಗೆ, ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಯಿತು.

ಸಮಾರಂಭದ ಸ್ಥಳ ಸಂಪೂರ್ಣ ಅಲಂಕೃತಗೊಂಡಿತ್ತು, ರುಚಿಕರ ಅಡುಗೆ ಸಿದ್ಧವಾಗಿತ್ತು ಮತ್ತು ಆಹ್ವಾನಿತರೆಲ್ಲರೂ ನೆರೆದಿದ್ದರು. ಆದರೆ, ಸಿಬ್ಬಂದಿ ಕೊರತೆ ಮತ್ತು ಇತರೆ ಕಾರ್ಯಾಚರಣೆಯ ಸಮಸ್ಯೆಗಳಿಂದಾಗಿ ವಿಮಾನಯಾನ ಸಂಸ್ಥೆ ಇಂಡಿಗೋ (Indigo) ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾದ ಪರಿಣಾಮ, ನವ ದಂಪತಿ ಭುವನೇಶ್ವರದಲ್ಲಿ ಸಿಲುಕಿಕೊಂಡರು.
ತಮ್ಮ ಜೀವನದ ಈ ಪ್ರಮುಖ ದಿನವನ್ನು ತಪ್ಪಿಸಿಕೊಳ್ಳಲು ಇಷ್ಟಪಡದ ದಂಪತಿ, ಕೊನೆಗೆ ತಂತ್ರಜ್ಞಾನದ ಮೊರೆ ಹೋದರು. ಹುಬ್ಬಳ್ಳಿಯ ಆರತಕ್ಷತೆ ಸ್ಥಳದಲ್ಲಿ ಅಳವಡಿಸಲಾಗಿದ್ದ ದೊಡ್ಡ ಪರದೆಯ ಮೇಲೆ ಭುವನೇಶ್ವರದಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಕಾಣಿಸಿಕೊಂಡರು.
ನವದಂಪತಿಗಳು ಅತಿಥಿಗಳನ್ನು ಅಭಿನಂದಿಸಿದರು ಮತ್ತು ಖುದ್ದಾಗಿ ಹಾಜರಾಗಲು ಸಾಧ್ಯವಾಗದ ಬಗ್ಗೆ ಕ್ಷಮೆ ಯಾಚಿಸಿದರು. ವರದಿಗಳ ಪ್ರಕಾರ, ಇಂಡಿಗೋ ವಿಮಾನಯಾನದಲ್ಲಿ ಉಂಟಾದ ಗಂಭೀರ ಕಾರ್ಯಾಚರಣೆಯ ಸಮಸ್ಯೆಯಿಂದಾಗಿ ದೇಶದ ಅನೇಕ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ.
ದಂಪತಿ ಡಿಸೆಂಬರ್ 3 ರಂದು ಹುಬ್ಬಳ್ಳಿಗೆ ಆಗಮಿಸಲು ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದರು. ಆದರೆ, ವಿಮಾನದ ನಿರಂತರ ವಿಳಂಬ ಮತ್ತು ಕೊನೆಗೆ ರದ್ದಾದ ಕಾರಣ, ಬೇರೆ ಮಾರ್ಗವಿಲ್ಲದೆ ಅವರು ಆನ್‌ಲೈನ್ ಮೂಲಕವೇ ತಮ್ಮ ಅತಿಥಿಗಳನ್ನು ಸ್ವಾಗತಿಸಿದರು. ದೂರದ ಊರುಗಳಿಂದ ಆಗಮಿಸಿದ್ದ ಸಂಬಂಧಿಕರು ಮತ್ತು ಅತಿಥಿಗಳಿಗೆ ನಿರಾಸೆಯಾಗದಂತೆ ದಂಪತಿಯ ಕುಟುಂಬಸ್ಥರು ಈ ವ್ಯವಸ್ಥೆ ಮಾಡಿದರು.

