ನವದೆಹಲಿ(ಡಿ.1): ಸಂಸತ್ತಿನ ಆವರಣಕ್ಕೆ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಅವರು ತಾವು ರಕ್ಷಿಸಿದ ಬೀದಿ ನಾಯಿಯೊಂದಿಗೆ ಕಾರಿನಲ್ಲಿ ಬಂದಿದ್ದ ಘಟನೆ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಚೌಧರಿ, “ಕಚ್ಚೋದು ಒಳಗಿರುವವರು, ನಾಯಿಯಲ್ಲ,” ಎಂದು ಆಡಳಿತ ಪಕ್ಷದ ಸದಸ್ಯರಿಗೆ ತಿರುಗೇಟು ನೀಡಿದ್ದಾರೆ.

ರೇಣುಕಾ ಚೌಧರಿ ಅವರು ಬೆಳಗ್ಗೆ ಬೀದಿಯಲ್ಲಿ ಅನಾಥವಾಗಿದ್ದ ನಾಯಿಯನ್ನು ರಕ್ಷಿಸಿ, ಅದನ್ನು ವೈದ್ಯರ ಬಳಿ ಕರೆದೊಯ್ಯಲು ಕಾರಿನಲ್ಲಿ ಕರೆದುಕೊಂಡು ಬಂದಿದ್ದರು. ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಕೆಲ ಸದಸ್ಯರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಇದು ‘ನಾಟಕ’ ಎಂದು ಟೀಕಿಸಿದ್ದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಚೌಧರಿ, “ಈ ಸರ್ಕಾರಕ್ಕೆ ಪ್ರಾಣಿಗಳೆಂದರೆ ಇಷ್ಟವಿಲ್ಲ. ಪ್ರಾಣಿಗಳಿಗೆ ಧ್ವನಿ ಇಲ್ಲ. ಅದು (ನಾಯಿ) ಕಾರಿನಲ್ಲಿತ್ತು, ಅದಕ್ಕೆ ಅವರ ಸಮಸ್ಯೆ ಏನು? ಅದು ಎಷ್ಟು ಚಿಕ್ಕದಾಗಿದೆ, ಅದು ಕಚ್ಚುವಂತೆ ಕಾಣುತ್ತಿದೆಯೇ? ಸಂಸತ್ತಿನ ಒಳಗೆ ಕುಳಿತಿರುವವರು ಕಚ್ಚುತ್ತಾರೆ, ನಾಯಿಗಳಲ್ಲ,” ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.
“ನಾಯಿಯನ್ನು ರಕ್ಷಿಸಬಾರದು ಎಂದು ಯಾವ ಕಾನೂನಿನಲ್ಲಿ ಹೇಳಿದೆ?” ಎಂದು ಪ್ರಶ್ನಿಸಿದರು. ರೇಣುಕಾ ಚೌಧರಿ ಅವರು ಈಗಾಗಲೇ ಹಲವು ಸಾಕುಪ್ರಾಣಿಗಳನ್ನು ಹೊಂದಿರುವ ಪ್ರಾಣಿಪ್ರಿಯರಾಗಿದ್ದಾರೆ. ಮೂಲಗಳ ಪ್ರಕಾರ, ಸಂಸದರನ್ನು ಇಳಿಸಿದ ನಂತರ ಅವರ ಚಾಲಕ ನಾಯಿಯನ್ನು ಪಶುವೈದ್ಯರ ಬಳಿ ಕರೆದೊಯ್ಯಬೇಕಿತ್ತು.
ಆದರೆ, ಬಿಜೆಪಿ ಸಂಸದ ಜಗದಂಬಿಕಾ ಪಾಲ್ ಅವರು ಚೌಧರಿ ಅವರ ನಡೆಯನ್ನು ‘ತಮಾಷೆ’ (ನಾಟಕ) ಎಂದು ಕರೆದು, ಸಂಸತ್ತಿನ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು. ಸರಿಯಾದ ದಾಖಲೆಗಳಿಲ್ಲದೆ ಯಾರನ್ನೂ ಸಂಸತ್ತಿನೊಳಗೆ ಕರೆತರಲು ಸಾಧ್ಯವಿಲ್ಲ ಎಂದು ಹೇಳಿದ ಅವರು, ಕಾಂಗ್ರೆಸ್ ಸಂಸದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

