ಬೆಂಗಳೂರು (ನ. 27): ನಗರದ ಹೃದಯಭಾಗದಲ್ಲಿರುವ ಕಬ್ಬನ್ ಪಾರ್ಕ್ (Cubbon Park) ಇದೇ ಮೊದಲ ಬಾರಿಗೆ ವಿಜೃಂಭಣೆಯ ಫಲಪುಷ್ಪ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಅಂಗವಾಗಿ ತೋಟಗಾರಿಕೆ ಇಲಾಖೆ ಆಯೋಜಿಸಿರುವ ಈ 11 ದಿನಗಳ ಹೂವಿನ ಹಬ್ಬ ಇಂದಿನಿಂದ (ನವೆಂಬರ್ 27) ಡಿಸೆಂಬರ್ 7ರವರೆಗೆ ಸಾರ್ವಜನಿಕರಿಗೆ ತೆರೆದಿರಲಿದೆ.

ಲಾಲ್ಬಾಗ್ ಮಾದರಿಯಲ್ಲೇ ಆಯೋಜಿಸಲಾಗಿರುವ ಈ ಬೃಹತ್ ಪ್ರದರ್ಶನದಲ್ಲಿ ಸುಮಾರು 20 ರಿಂದ 25 ಸಾವಿರಕ್ಕೂ ಹೆಚ್ಚು ಕುಂಡಗಳಲ್ಲಿನ ಅಪರೂಪದ ಮತ್ತು ವೈವಿಧ್ಯಮಯ ಹೂಗಳನ್ನು ಪ್ರದರ್ಶಿಸಲಾಗಿದೆ. ಪ್ರಮುಖವಾಗಿ ಮಕ್ಕಳನ್ನು ಆಕರ್ಷಿಸಲು ಹುಲಿ, ಆನೆ, ಚಿರತೆ, ಚಿಟ್ಟೆ ಹಾಗೂ ವಿವಿಧ ಹಣ್ಣುಗಳ ಆಕರ್ಷಕ ಹೂವಿನ ಕಲಾಕೃತಿಗಳನ್ನು ರಚಿಸಲಾಗಿದೆ.
ಪ್ರಮುಖ ಆಕರ್ಷಣೆಗಳು:
ವನ್ಯಜೀವಿ ಕಲಾಕೃತಿಗಳು: ಹೂಗಳಿಂದ ತಯಾರಿಸಿದ ಆನೆ, ಹುಲಿ, ಚಿರತೆ ಮತ್ತು ಡಾಲ್ಫಿನ್ನಂತಹ 50ಕ್ಕೂ ಹೆಚ್ಚು ಕಲಾಕೃತಿಗಳು.

ವೈವಿಧ್ಯಮಯ ಹೂಗಳು: 50ಕ್ಕೂ ಹೆಚ್ಚು ಬಗೆಯ ಅಲಂಕಾರಿಕ, ದೇಸಿ ಮತ್ತು ವಿದೇಶಿ ಪುಷ್ಪ ಪ್ರಭೇದಗಳ ಪ್ರದರ್ಶನ.

ಪ್ರವೇಶ ಶುಲ್ಕ: ವಯಸ್ಕರಿಗೆ ₹50 ಮತ್ತು ಮಕ್ಕಳಿಗೆ ₹10 ನಿಗದಿಪಡಿಸಲಾಗಿದ್ದು, ಸಮವಸ್ತ್ರದಲ್ಲಿ ಬರುವ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿದೆ.


ಈ ಪುಷ್ಪ ಪ್ರದರ್ಶನವು ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ನಡೆಯಲಿದೆ. ಪ್ರದರ್ಶನ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಸುತ್ತಮುತ್ತ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ. ಹೂವಿನ ಲೋಕದ ಅದ್ಭುತ ಅನುಭವ ಪಡೆಯಲು ಬೆಂಗಳೂರಿಗರು ಕುಟುಂಬ ಸಮೇತ ಭೇಟಿ ನೀಡಬಹುದು.

