ಗುವಾಹಟಿ(ನ. 26): ಭಾರತ ತಂಡವು ಮತ್ತೊಮ್ಮೆ ತವರು ನೆಲದಲ್ಲಿ ಹೀನಾಯ ಸೋಲಿಗೆ ಶರಣಾಗಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 408 ರನ್ಗಳ ಭಾರೀ ಅಂತರದಿಂದ ಸೋತಿದೆ. ಈ ಸೋಲು ಭಾರತದ ಟೆಸ್ಟ್ ಇತಿಹಾಸದಲ್ಲಿ ರನ್ಗಳ ಲೆಕ್ಕಾಚಾರದಲ್ಲಿ ದಾಖಲಾದ ಅತಿದೊಡ್ಡ ಸೋಲು ಆಗಿದೆ.

ನಿರಾಸಕ್ತಿ ಮತ್ತು ಕೌಶಲ್ಯದ ಕೊರತೆಯಿಂದ ಬಳಲುತ್ತಿದ್ದ ಭಾರತ ತಂಡವು ಆಫ್ರಿಕಾ ಎದುರು ಶರಣಾಗಿದ್ದು, ಆ ಮೂಲಕ ದಕ್ಷಿಣ ಆಫ್ರಿಕಾ ತಂಡವು ಬರೋಬ್ಬರಿ 25 ವರ್ಷಗಳ ನಂತರ ಭಾರತದ ನೆಲದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸತತ ಎರಡನೇ ವೈಟ್ವಾಶ್
ಕೇವಲ 13 ತಿಂಗಳ ಅವಧಿಯಲ್ಲಿ ತವರು ನೆಲದಲ್ಲಿ ಭಾರತ ತಂಡವು ವೈಟ್ವಾಶ್ ಆಗಿರುವುದು ಇದು ಎರಡನೇ ಬಾರಿ. ಈ ಸೋಲಿನಿಂದಾಗಿ ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶದ ಹಾದಿ ಮತ್ತಷ್ಟು ಕಠಿಣವಾಗಿದೆ.

ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಭಾರತವು ಸದ್ಯ ತವರಿನಲ್ಲಿ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಒಟ್ಟು ಐದು ಟೆಸ್ಟ್ಗಳನ್ನು ಸೋತಂತಾಗಿದೆ.

