ದಿಢೀರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ತಂದೆ: ಮದುವೆ ಮುಂದೂಡಿದ ಸ್ಮೃತಿ ಮಂಧಾನಾ

ದಿಢೀರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ತಂದೆ: ಮದುವೆ ಮುಂದೂಡಿದ ಸ್ಮೃತಿ ಮಂಧಾನಾ

ನಿನ್ನೆ (ನವೆಂಬರ್ 23) ನಡೆಯಬೇಕಿದ್ದ ಭಾರತೀಯ ಮಹಿಳಾ ಕ್ರಿಕೆಟ್‌ನ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನಾ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರ ಬಹುನಿರೀಕ್ಷಿತ ವಿವಾಹ ಸಮಾರಂಭವನ್ನು ಅನಿಶ್ಚಿತಾವಧಿಗೆ ಮುಂದೂಡಲಾಗಿದೆ. ಸ್ಮೃತಿ ಮಂಧಾನಾ ಅವರ ತಂದೆಯವರಿಗೆ ದಿಢೀರನೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು, ಅವರನ್ನು ಆಸ್ಪತ್ರೆಗೆ ದಾಖಲಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರ ಮ್ಯಾನೇಜರ್ ದೃಢಪಡಿಸಿದ್ದಾರೆ.

ಮದುವೆ ದಿನವೇ ಆಘಾತ: ಆಸ್ಪತ್ರೆಯಲ್ಲಿ ಸ್ಮೃತಿ ತಂದೆ!

ಮದುವೆ ಸಮಾರಂಭಕ್ಕೆ ಎಲ್ಲಾ ಸಿದ್ಧತೆಗಳು ಮುಗಿದಿದ್ದು, ಕುಟುಂಬಸ್ಥರು, ಸ್ನೇಹಿತರು ಮತ್ತು ಗಣ್ಯರು ಆಗಮಿಸಿ ಸಂಭ್ರಮದ ವಾತಾವರಣವಿತ್ತು. ಈ ಸಂತಸದ ನಡುವೆಯೇ ಇಂದು ಬೆಳಗ್ಗೆ ಸ್ಮೃತಿ ಮಂಧಾನಾ ಅವರ ತಂದೆ ಶ್ರೀನಿವಾಸ್ ಮಂಧಾನಾ ಅವರಿಗೆ ತೀವ್ರ ಆರೋಗ್ಯ ತುರ್ತು ಪರಿಸ್ಥಿತಿ (Health Emergency) ಎದುರಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ವಿವಾಹದ ದಿನವೇ ಇಂತಹ ಆಘಾತಕಾರಿ ಬೆಳವಣಿಗೆಯಿಂದಾಗಿ, ಕುಟುಂಬದವರು ತಕ್ಷಣವೇ ಮದುವೆ ಸಮಾರಂಭವನ್ನು ನಿಲ್ಲಿಸಲು ನಿರ್ಧರಿಸಿದರು.

ಮ್ಯಾನೇಜರ್ ಹೇಳಿಕೆ: “ತಂದೆ ಗುಣಮುಖರಾಗುವವರೆಗೂ ಮದುವೆ ಇಲ್ಲ”ಸ್ಮೃತಿ ಮಂದಾನಾ ಅವರ ಮ್ಯಾನೇಜರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, “ಸ್ಮೃತಿ ಅವರು ತಮ್ಮ ತಂದೆಯವರೊಂದಿಗೆ ಬಹಳ ಆತ್ಮೀಯವಾಗಿದ್ದಾರೆ. ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ ಮದುವೆ ಸಮಾರಂಭವನ್ನು ಮುಂದುವರಿಸಲು ಸ್ಮೃತಿ ನಿರಾಕರಿಸಿದ್ದಾರೆ. ಆದ್ದರಿಂದ ವಿವಾಹವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ” ಎಂದು ತಿಳಿಸಿದ್ದಾರೆ.

ಪ್ರಸ್ತುತ, ಸ್ಮೃತಿ ಅವರ ತಂದೆಯವರು ವೈದ್ಯರ ನಿಗಾದಲ್ಲಿ ಇದ್ದು, ಅಭಿಮಾನಿಗಳು ಮತ್ತು ಸ್ನೇಹಿತರು ಅವರ ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತಿದ್ದಾರೆ.

ಸ್ಮೃತಿ ಮಂಧಾನಾ ಮತ್ತು ಪಲಾಶ್ ಮುಚ್ಚಲ್ ಅವರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಇತ್ತೀಚೆಗೆ ತಮ್ಮ ನಿಶ್ಚಿತಾರ್ಥವನ್ನು ದೃಢಪಡಿಸಿದ್ದರು. ಕಳೆದೆರಡು ದಿನಗಳಿಂದ ವಿವಾಹ ಪೂರ್ವದ ಹಳದಿ ಮತ್ತು ಸಂಗೀತ ಸಮಾರಂಭಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇಡೀ ದೇಶವೇ ಈ ಜೋಡಿಯ ವಿವಾಹಕ್ಕೆ ಕಾತರದಿಂದ ಕಾಯುತ್ತಿತ್ತು.ಆದರೆ, ಕೌಟುಂಬಿಕ ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ಈ ಬಹು ನಿರೀಕ್ಷಿತ ವಿವಾಹಕ್ಕೆ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದೆ.

ರಾಷ್ಟ್ರೀಯ