ಸೌದಿ ಅರೇಬಿಯಾದ ಮದೀನಾದಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಅನೇಕ ಭಾರತೀಯ ಉಮ್ರಾ ಯಾತ್ರಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮೃತರಲ್ಲಿ ತೆಲಂಗಾಣದವರ ಸಂಖ್ಯೆಯೇ ಹೆಚ್ಚು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

ಸುಮಾರು 40 ಮಂದಿ ಭಾರತೀಯರು ಪ್ರಯಾಣಿಸುತ್ತಿದ್ದ ಬಸ್, ಸ್ಥಳೀಯ ಸಮಯದ ಪ್ರಕಾರ ಬೆಳಗಿನ 1.30ರ ಸುಮಾರಿಗೆ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಜಿದ್ದಾದಲ್ಲಿರುವ ಭಾರತೀಯ ರಾಯಬಾರ ಕಚೇರಿ ತುರ್ತು ಸಹಾಯಕ್ಕಾಗಿ ಕಂಟ್ರೋಲ್ ರೂಮ್ ತೆರೆಯಲಾಗಿದೆ ಎಂದು ಪ್ರಕಟಿಸಿದೆ.
ಪ್ರಸ್ತುತ ರಷ್ಯಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಪಘಾತದ ಬಗ್ಗೆ ಆಘಾತ ವ್ಯಕ್ತಪಡಿಸಿ, “ರಿಯಾದ್ ರಾಯಬಾರಿ ಕಚೇರಿ ಮತ್ತು ಜಿದ್ದಾ ಕಾನ್ಸುಲೇಟ್ ಭಾರತೀಯರಿಗೆ ಎಲ್ಲಾ ರೀತಿಯ ಸಹಾಯ ನೀಡುತ್ತಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಾಳುಗಳು ಬೇಗ ಗುಣಮುಖರಾಗಲಿ” ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಕೂಡ ಘಟನೆಗೆ ದುಃಖ ವ್ಯಕ್ತಪಡಿಸಿದ್ದಾರೆ. ಮಕ್ಕಾದಿಂದ ಮದೀನಾಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಹೈದರಾಬಾದ್ ನಿವಾಸಿಗಳೂ ಪ್ರಯಾಣಿಕರಲ್ಲಿದ್ದಾರೆ ಎಂಬ ವರದಿ ಹಿನ್ನೆಲೆಯಲ್ಲಿ, ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಸೂಚನೆ ನೀಡಿದ್ದಾರೆ.
ಮುಖ್ಯ ಕಾರ್ಯದರ್ಶಿ ಕೆ. ರಾಮಕೃಷ್ಣ ರಾವ್ ಅವರು ದೆಹಲಿಯ ಸಂಯೋಜನಾ ಕಾರ್ಯದರ್ಶಿ ಗೌರವ್ ಉಪ್ಪಾಲ್ ಅವರೊಂದಿಗೆ ಮಾತನಾಡಿ ಅಗತ್ಯ ಮಾರ್ಗದರ್ಶನ ನೀಡಿದ್ದಾರೆ ಎಂದು ಸಿಎಂ ಕಚೇರಿ ತಿಳಿಸಿದೆ.
ಇದೇ ಸಂದರ್ಭದಲ್ಲಿ, ಘಟನೆ ಸಂಬಂಧಿತ ಮಾಹಿತಿಯನ್ನು ಕುಟುಂಬಗಳಿಗೆ ತಲುಪಿಸುವ ಮತ್ತು ನೆರವಿನ ಕಾರ್ಯಗಳ ಮೇಲ್ವಿಚಾರಣೆ ಮಾಡಲು ಸಚಿವಾಲಯದಲ್ಲಿ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದೆ.

