ನವದೆಹಲಿ, ನವೆಂಬರ್ 10: ದೆಹಲಿಯ ಐತಿಹಾಸಿಕ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಹತ್ತಿರ ಇಂದು ಸಂಜೆ ಸಂಭವಿಸಿದ ಭಾರೀ ಸ್ಫೋಟ ರಾಜಧಾನಿಯನ್ನು ನಡುಗಿಸಿದೆ. ಸ್ಫೋಟದಲ್ಲಿ 8 ಮಂದಿ ಸಾವನ್ನಪ್ಪಿದ್ದು, 18 ಮಂದಿ ಗಾಯಗೊಂಡಿದ್ದಾರೆ ಎಂದು ದೆಹಲಿ ಅಗ್ನಿಶಾಮಕ ಇಲಾಖೆ ದೃಢಪಡಿಸಿದೆ.

ಸ್ಫೋಟ ಸಂಭವಿಸಿದ ಸ್ಥಳವನ್ನು ಪೊಲೀಸರು ಸಂಪೂರ್ಣವಾಗಿ ಸುತ್ತುವರೆದಿದ್ದು, ಫರೆನ್ಸಿಕ್ ಮತ್ತು ಎನ್ಎಸ್ಜಿ (NSG) ತಂಡಗಳು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿವೆ.

ಘಟನೆ ವಿವರ
ಸ್ಫೋಟವು ಕೆಂಪುಕೋಟೆ ಮೆಟ್ರೋ ನಿಲ್ದಾಣದ ಗೇಟ್ ನಂ.1 ಹತ್ತಿರ ನಿಲ್ಲಿಸಿದ್ದ ಕಾರಿನಲ್ಲಿ ಸಂಭವಿಸಿದೆ ಎಂದು ಅಗ್ನಿಶಾಮಕ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.ಸ್ಫೋಟದ ತೀವ್ರತೆಯಿಂದ ಸುತ್ತಮುತ್ತ ನಿಂತಿದ್ದ ಅನೇಕ ವಾಹನಗಳ ಕಿಟಕಿಗಳು ಒಡೆದಿದ್ದು, ಬೆಂಕಿಯ ಜ್ವಾಲೆ ಆಕಾಶಕ್ಕೇರಿತ್ತು.
ಸ್ಥಳಕ್ಕೆ ಏಳು ಅಗ್ನಿಶಾಮಕ ವಾಹನಗಳು ತಕ್ಷಣ ಧಾವಿಸಿವೆ. ಪೊಲೀಸರು ಪ್ರದೇಶವನ್ನು ಖಾಲಿಮಾಡಿ, ಭದ್ರತೆ ಹೆಚ್ಚಿಸಿದ್ದಾರೆ.

ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಘಟನೆಯ ಕುರಿತು ಮಾಹಿತಿ ಪಡೆದಿದ್ದು, ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಮೋದಿ ಅವರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿ, ಗಾಯಾಳುಗಳಿಗೆ ಬೇಗ ಗುಣಮುಖಕ್ಕೆ ಹಾರೈಕೆ ಮಾಡಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರು LNJP ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ಭೇಟಿಯಾಗಿ ಅವರ ಸ್ಥಿತಿಯ ಕುರಿತು ಮಾಹಿತಿ ಪಡೆದಿದ್ದಾರೆ. ಅವರು ಭದ್ರತಾ ಹಾಗೂ ಗುಪ್ತಚರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತನಿಖೆಯ ಪ್ರಗತಿ ಪರಿಶೀಲನೆ ನಡೆಸಿದ್ದಾರೆ.

ಪೊಲೀಸರು ಈ ಸ್ಫೋಟವು ಯೋಜಿತ ಬಾಂಬ್ ಸ್ಫೋಟವೇ ಅಥವಾ ಆಕಸ್ಮಿಕ ತಾಂತ್ರಿಕ ದೋಷದಿಂದ ಉಂಟಾಗಿದೆಯೇ ಎಂಬುದನ್ನು ಪತ್ತೆಹಚ್ಚಲು ತೀವ್ರ ತನಿಖೆ ಕೈಗೊಂಡಿದ್ದಾರೆ.ಫರೆನ್ಸಿಕ್ ತಜ್ಞರು ಕಾರಿನ ಅವಶೇಷಗಳನ್ನು ಸಂಗ್ರಹಿಸಿ ಪರೀಕ್ಷೆ ಆರಂಭಿಸಿದ್ದಾರೆ.

