ಉಲಾನ್‌ಬಾಟರ್ (ಮಂಗೋಲಿಯಾ): ಸ್ಯಾನ್ ಫ್ರಾನ್ಸಿಸ್ಕೋದಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ (AI174) ಶನಿವಾರ ಮಧ್ಯಾಹ್ನ ತಾಂತ್ರಿಕ ತೊಂದರೆಯ ಶಂಕೆಯಿಂದ ಮಂಗೋಲಿಯಾದ ಉಲಾನ್‌ಬಾಟರ್‌ನ ಚಿಂಗೀಸ್ ಖಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ ಎಂದು ಏರ್ ಇಂಡಿಯಾ ದೃಢಪಡಿಸಿದೆ.

ಏರ್ ಇಂಡಿಯಾ ವಕ್ತಾರರ ಮಾಹಿತಿ ಪ್ರಕಾರ, “ಸ್ಯಾನ್ ಫ್ರಾನ್ಸಿಸ್ಕೋದಿಂದ ದೆಹಲಿಗೆ ತೆರಳುತ್ತಿದ್ದ AI174 ವಿಮಾನವು ಮಧ್ಯಮಾರ್ಗದಲ್ಲಿ ತಾಂತ್ರಿಕ ಸಮಸ್ಯೆಯ ಶಂಕೆ ಉಂಟಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮಂಗೋಲಿಯಾದ ಉಲಾನ್‌ಬಾಟರ್‌ನಲ್ಲಿ ಲ್ಯಾಂಡ್ ಮಾಡಿತು. ವಿಮಾನ ಸುರಕ್ಷಿತವಾಗಿ ಇಳಿಯಿತು ಮತ್ತು ತಾಂತ್ರಿಕ ತಪಾಸಣೆ ನಡೆಯುತ್ತಿದೆ,” ಎಂದು ತಿಳಿಸಿದ್ದಾರೆ.
ವಿಮಾನದಲ್ಲಿದ್ದ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಸ್ಥಳೀಯ ಅಧಿಕಾರಿಗಳು ಹಾಗೂ ನೆಲದ ಸಹಾಯಕ ತಂಡಗಳು ಪ್ರಯಾಣಿಕರಿಗೆ ಅಗತ್ಯ ಸಹಾಯ ಒದಗಿಸಿದ್ದಾರೆ.ವಿಮಾನದಲ್ಲಿದ್ದ ಪ್ರಯಾಣಿಕರ ಸಂಖ್ಯೆ ಕುರಿತು ಇನ್ನೂ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ.
ಏರ್ ಇಂಡಿಯಾ ಪ್ರಕಟಣೆ ಪ್ರಕಾರ, “ಪ್ರಯಾಣಿಕರ ಸುರಕ್ಷತೆ ನಮ್ಮ ಅತ್ಯುನ್ನತ ಆದ್ಯತೆ. ಈ ಅನಿರೀಕ್ಷಿತ ಪರಿಸ್ಥಿತಿಯಿಂದ ಉಂಟಾದ ಅಸೌಕರ್ಯಕ್ಕಾಗಿ ವಿಷಾದಿಸುತ್ತೇವೆ. ಶೀಘ್ರದಲ್ಲೇ ಪ್ರಯಾಣಿಕರ ಮುಂದಿನ ಪ್ರಯಾಣ ವ್ಯವಸ್ಥೆ ಮಾಡಲು ಕ್ರಮಗಳನ್ನು ಕೈಗೊಂಡಿದ್ದೇವೆ,” ಎಂದು ತಿಳಿಸಿದೆ.


