ರಷ್ಯಾ ತನ್ನ ಹೊಸ ಪರಮಾಣು ಚಾಲಿತ ಹಾಗೂ ಅಣ್ವಸ್ತ್ರ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ನೀರಿನೊಳಗಿನ ಪೋಸಿಡೊನ್ ಪರಮಾಣು ಡ್ರೋನ್ ಯಶಸ್ವಿ ಪರೀಕ್ಷೆ ನಡೆಸಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸಿದ್ದಾರೆ. ಈ ಡ್ರೋನ್ನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದು, ಅಮೆರಿಕದತ್ತ ತೀವ್ರ ಸಂದೇಶವೊಂದನ್ನು ಕಳುಹಿಸಿದಂತಾಗಿದೆ.

ಇದಕ್ಕೂ ಕೆಲ ದಿನಗಳ ಹಿಂದೆ ರಷ್ಯಾ ‘ಬುರೇವೇಸ್ತ್ನಿಕ್’ ಅಣುಶಕ್ತಿ ಚಾಲಿತ ಕ್ರೂಸ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದ್ದನ್ನು ಪುಟಿನ್ ಪ್ರಕಟಿಸಿದ್ದರು. ಉಕ್ರೇನ್ ಯುದ್ಧದ ಹಿನ್ನೆಲೆದಲ್ಲಿ ಈ ಬೆಳವಣಿಗೆಗೆ ಜಾಗತಿಕವಾಗಿ ಹೆಚ್ಚಿನ ಪ್ರಾಮುಖ್ಯತೆ ದೊರೆತಿದೆ.
ಉಕ್ರೇನ್ ಯುದ್ಧದಲ್ಲಿ ಗಾಯಗೊಂಡ ಸೈನಿಕರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಪುಟಿನ್, ಪೊಸೈಡನ್ ಡ್ರೋನ್ ಅಣುಶಕ್ತಿಯ ಸಹಾಯದಿಂದ ಮೊದಲ ಬಾರಿಗೆ ಕಾರ್ಯನಿರ್ವಹಿಸಿದ್ದು, ಪರೀಕ್ಷೆ ಸಂಪೂರ್ಣ ಯಶಸ್ವಿಯಾಗಿದೆ ಎಂದು ಹೇಳಿದರು. ಈ ಡ್ರೋನ್ ವೇಗ ಮತ್ತು ಆಳದ ದೃಷ್ಟಿಯಿಂದ ವಿಶ್ವದಲ್ಲಿನ ಯಾವುದೇ ವ್ಯವಸ್ಥೆಗಳಿಗಿಂತ ಮೇಲು ಎಂದೂ ಅವರು ಹೇಳಿದರು.
ಪುಟಿನ್ ಅವರ ಹೇಳಿಕೆಯಲ್ಲಿ, ಪೋಸಿಡೊನ್ನ ಅಣು ರಿಯಾಕ್ಟರ್ ಸಾಮಾನ್ಯ ಅಣು ನೌಕೆಯ ರಿಯಾಕ್ಟರ್ಗಿಂತ 100 ಪಟ್ಟು ಚಿಕ್ಕದು, ಆದರೆ ಅದರ ಅಣ್ವಸ್ತ್ರ ಶಕ್ತಿಯು ರಷ್ಯಾದ ಹೊಸ ‘ಸಾರ್ಮಾಟ್ ಅಂತರಖಂಡೀಯ ಕ್ಷಿಪಣಿಯಿಗಿಂತಲೂ ಹೆಚ್ಚಿನದು ಎಂದು ಹೇಳಿದರು.

