ಭಾರತಕ್ಕೆ ಮೆಹುಲ್ ಚೋಕ್ಸಿ ಹಸ್ತಾಂತರಕ್ಕೆ ಬೆಲ್ಜಿಯಂ ನ್ಯಾಯಾಲಯ ಅನುಮತಿ

ಭಾರತಕ್ಕೆ ಮೆಹುಲ್ ಚೋಕ್ಸಿ ಹಸ್ತಾಂತರಕ್ಕೆ ಬೆಲ್ಜಿಯಂ ನ್ಯಾಯಾಲಯ ಅನುಮತಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) 13,000 ಕೋಟಿ ರೂಪಾಯಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಲು ಬೆಲ್ಜಿಯಂ ನ್ಯಾಯಾಲಯವು ಅನುಮತಿ ನೀಡಿದೆ.

ಬೆಲ್ಜಿಯಂನ ಅಂಟ್ವರ್ಪ್ ನಗರ ನ್ಯಾಯಾಲಯವು ನಿನ್ನೆ ನೀಡಿದ ತೀರ್ಪಿನಲ್ಲಿ, ಭಾರತದ ವಿನಂತಿಯ ಮೇರೆಗೆ ಬೆಲ್ಜಿಯಂ ಪೊಲೀಸರ ಬಂಧನ ಕ್ರಮ ಕಾನೂನುಬದ್ಧವೆಂದು ಸ್ಪಷ್ಟಪಡಿಸಿದೆ. ಈ ತೀರ್ಪು ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವತ್ತದ ಪ್ರಮುಖ ಹೆಜ್ಜೆಯಾಗಿದ್ದು, ಪ್ರಕರಣದ ತನಿಖೆಗೆ ಹೊಸ ವೇಗ ನೀಡಲಿದೆ.

ಚೋಕ್ಸಿಯನ್ನು ಕಳೆದ ಏಪ್ರಿಲ್ 11ರಂದು ಅಂಟ್ವರ್ಪ್ ಪೊಲೀಸರು ಭಾರತದಿಂದ ಬಂದ ಕೇಂದ್ರ ತನಿಖಾ ದಳದ (CBI) ಅಧಿಕೃತ ವಿನಂತಿಯ ಮೇರೆಗೆ ಬಂಧಿಸಿದ್ದರು. ಬಂಧನದ ನಂತರದಿಂದಲೇ ಅವರು ಪೊಲೀಸ್ ವಶದಲ್ಲಿದ್ದು, ಪರಾರಿಯಾಗುವ ಆತಂಕದ ಹಿನ್ನೆಲೆಯಲ್ಲಿ ಅವರ ಜಾಮೀನು ಅರ್ಜಿಗಳನ್ನು ನ್ಯಾಯಾಲಯವು ಹಲವು ಬಾರಿ ತಳ್ಳಿ ಹಾಕಿತ್ತು.

ವಿಚಾರಣೆಯ ವೇಳೆ ಬೆಲ್ಜಿಯಂ ಪ್ರಾಸಿಕ್ಯೂಟರ್‌ಗಳು ಭಾರತದ ಪರವಾಗಿ ವಾದಿಸಿದ್ದು, ಚೋಕ್ಸಿಯ ಪರ ವಕೀಲರು ಹಸ್ತಾಂತರ ಕ್ರಮವನ್ನು ವಿರೋಧಿಸಿದರು. ಆದರೆ ನ್ಯಾಯಾಲಯವು ವಂಚನೆ, ಅಪರಾಧ ಸಂಚು ಮತ್ತು ಭ್ರಷ್ಟಾಚಾರದ ಆರೋಪಗಳು ಬೆಲ್ಜಿಯಂ ಕಾನೂನಿನ ಅಡಿಗೂ ಮಾನ್ಯವೆಂದು ಹೇಳಿದೆ.

ಈಗ ಚೋಕ್ಸಿಗೆ ಬೆಲ್ಜಿಯಂ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಅವರು ಮೇಲ್ಮನವಿ ಸಲ್ಲಿಸದಿದ್ದರೆ ಅಥವಾ ಅದು ತಿರಸ್ಕೃತವಾದರೆ, ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಆರಂಭವಾಗಲಿದೆ.

ಅಂತರಾಷ್ಟ್ರೀಯ ಅಪರಾಧ ರಾಷ್ಟ್ರೀಯ