ಬೆಂಗಳೂರು: ರಾಜ್ಯದ ಶಾಲಾ ಮತ್ತು ಪದವಿ ಪೂರ್ವ ಶಿಕ್ಷಣ ಪರೀಕ್ಷೆಗಳಲ್ಲಿ ಮಹತ್ವದ ಬದಲಾವಣೆ ತಂದಿದ್ದು, ಮುಂದಿನ 2025-26ನೇ ಶೈಕ್ಷಣಿಕ ಸಾಲಿನಿಂದಲೇ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಉತ್ತೀರ್ಣತಾ ಅಂಕವನ್ನು ಶೇ. 35 ರಿಂದ ಶೇ. 33 ಕ್ಕೆ ಇಳಿಸಲು ತೀರ್ಮಾನಿಸಲಾಗಿದೆ. ಈ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಧಿಕೃತ ಘೋಷಣೆ ಮಾಡಿದ್ದಾರೆ.

ಸಚಿವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಹೆಚ್ಚಿಸುವುದರ ಜೊತೆಗೆ ಸಿಬಿಎಸ್ಇ ಹಾಗೂ ಇತರ ರಾಜ್ಯಗಳ ಪದ್ದತಿಗೆ ಏಕರೂಪತೆ ತರಲು ಈ ನಿರ್ಧಾರ ಕೈಗೊಂಡಿದ್ದೇವೆ” ಎಂದು ತಿಳಿಸಿದರು.
🔸 ಹೊಸ ನಿಯಮದ ಪ್ರಕಾರ:
ಎಸ್ಎಸ್ಎಲ್ಸಿ (SSLC): ಪ್ರಸ್ತುತ 625 ಅಂಕಗಳಿಗೆ ಕನಿಷ್ಠ ಶೇ. 35 ಅಂದರೆ 219 ಅಂಕ ಪಡೆಯಬೇಕಾಗಿತ್ತು. ಈಗ ಹೊಸ ಮಾನದಂಡದಂತೆ ಕೇವಲ 206 ಅಂಕ (ಶೇ. 33) ಗಳಿಸಿದರೆ ಪಾಸ್ ಆಗಬಹುದು. ಆದರೆ ಪ್ರತಿ ವಿಷಯದಲ್ಲಿ ಕನಿಷ್ಠ 30 ಅಂಕಗಳಿಸಬೇಕೆಂಬ ನಿಯಮ ಅನ್ವಯವಾಗುತ್ತದೆ.
ದ್ವಿತೀಯ ಪಿಯುಸಿ (II PUC): 600 ಅಂಕಗಳಿಗೆ ಮೊದಲು 210 ಅಂಕಗಳು (ಶೇ. 35) ಅಗತ್ಯವಿತ್ತು. ಹೊಸ ನಿಯಮದಲ್ಲಿ 198 ಅಂಕಗಳು (ಶೇ. 33) ಸಾಕು. ಪ್ರತಿ ವಿಷಯದಲ್ಲಿ ಲಿಖಿತ ಮತ್ತು ಆಂತರಿಕ ಅಂಕ ಸೇರಿ ಕನಿಷ್ಠ 30 ಅಂಕ ಕಡ್ಡಾಯ.
ಈ ಬದಲಾವಣೆಯ ಕರಡು ಅಧಿಸೂಚನೆ ಬಿಡುಗಡೆ ಮಾಡಿದ ನಂತರ ಸಾರ್ವಜನಿಕರಿಂದ ಅಭಿಪ್ರಾಯ ಕೇಳಲಾಗಿತ್ತು. ಅದರಲ್ಲಿ ಶೇ. 33ರ ಪರವಾಗಿ 701 ಪತ್ರಗಳು ಬಂದಿದ್ದು, ಶೇ. 35ರ ಪರವಾಗಿ ಕೇವಲ 8 ಪತ್ರಗಳು ಬಂದಿದ್ದವು. ಹೀಗಾಗಿ ಬಹುಮತದ ಅಭಿಪ್ರಾಯಕ್ಕೆ ಅನುಗುಣವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ವಿವರಿಸಿದರು.
ಪ್ರಥಮ ಭಾಷೆಯ ಅಂಕ ಇಳಿಕೆ ವಿಚಾರ ಇನ್ನೂ ನಿರ್ಧಾರವಾಗಿಲ್ಲ:
ಪ್ರಥಮ ಭಾಷೆಯ ಗರಿಷ್ಠ ಅಂಕವನ್ನು 125 ರಿಂದ 100 ಕ್ಕೆ ಇಳಿಸುವ ಪ್ರಸ್ತಾಪ ಇನ್ನೂ ಅಂತಿಮವಾಗಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಸಾರ್ವಜನಿಕರಿಂದ ಅಭಿಪ್ರಾಯ ಪಡೆದು ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

