ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭಾಗವಹಿಸಿದರು. ನವದೆಹಲಿಯಲ್ಲಿ ನಡೆದ ಈ ಭವ್ಯ ಸಮಾರಂಭದಲ್ಲಿ ಸಂಘದ ಪರಂಪರೆ, ಸಾಂಸ್ಕೃತಿಕ ಕೊಡುಗೆಗಳು ಹಾಗೂ ದೇಶದ ಏಕತೆಗಾಗಿ ಮಾಡಿದ ಪಾತ್ರವನ್ನು ಸ್ಮರಿಸಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ರಾಷ್ಟ್ರ ನಿರ್ಮಾಣಕ್ಕಾಗಿ ಆರ್‌ಎಸ್‌ಎಸ್ ಅಹರ್ನಿಶಿ ಶ್ರಮಿಸುತ್ತಿದೆ. ನೂರು ವರ್ಷಗಳ ಹಿಂದೆ ಸ್ಥಾಪಿತವಾದ ಸಂಘವು ಸಾವಿರಾರು ವರ್ಷಗಳಿಂದ ಮುಂದುವರಿದಿದ್ದ ಪರಂಪರೆಯ ಪುನರುತ್ಥಾನವಾಗಿದೆ” ಎಂದು ಹೇಳಿದರು.
ಅವರು ಮುಂದುವರಿದು, ಸಂಘದ ಸೇವಾ ಚಟುವಟಿಕೆಗಳನ್ನು ಮೆಚ್ಚಿ, 1963ರ ಗಣರಾಜ್ಯೋತ್ಸವ ಪೆರೇಡಿನಲ್ಲಿ ಸ್ವಯಂಸೇವಕರು ಹೆಮ್ಮೆಯಿಂದ ಭಾಗವಹಿಸಿದ್ದನ್ನು ನೆನಪಿಸಿದರು. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ವಿಶೇಷ ಸ್ಮಾರಕ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿದರು.
ನಾಳೆ ವಿಜಯದಶಮಿ ಹಬ್ಬದ ನಿಮಿತ್ತವಾಗಿ, ಮೋದಿ “ಇದು ಸತ್ಯದ ಜಯ, ಧರ್ಮದ ಜಯ, ಅಂಧಕಾರದ ಮೇಲೆ ಬೆಳಕಿನ ಜಯವನ್ನು ಸಾರುವ ಹಬ್ಬ” ಎಂದು ಹೇಳಿದರು.
ಸಾಂಸ್ಕೃತಿಕ ಸಚಿವ ಗಜೆಂದ್ರ ಸಿಂಗ್ ಶೇಖಾವತ್ ಅವರು “ಆರ್‌ಎಸ್‌ಎಸ್ ಜನರಲ್ಲಿ ರಾಷ್ಟ್ರ ನಿರ್ಮಾಣ ಹಾಗೂ ಸಾಂಸ್ಕೃತಿಕ ಜಾಗೃತಿ ಮೂಡಿಸಿದೆ” ಎಂದು ಅಭಿಪ್ರಾಯ ಪಟ್ಟರು.
ಸಂಘದ ಸಾರ್ಕಾರ್ಯವಾಹ ದತ್ತಾತ್ರೇಯ ಹೊಸಬಳೆ ಮಾತನಾಡಿ, “ದೇಶದ ಪ್ರತಿಯೊಂದು ಮೂಲೆಯಲ್ಲಿಯೂ ಸಂಘದ ಸೇವಾ ಚಟುವಟಿಕೆಗಳು ಗೋಚರಿಸುತ್ತಿವೆ. ಸ್ವಯಂಸೇವಕರು ಸಮಾಜ ಅಭಿವೃದ್ಧಿ, ರಾಷ್ಟ್ರೀಯ ಸೇವೆ, ಭದ್ರತೆ ಹಾಗೂ ಕಲ್ಯಾಣಕ್ಕಾಗಿ ತೊಡಗಿಸಿಕೊಂಡಿದ್ದಾರೆ” ಎಂದು ಹೇಳಿದರು.

