ಬೆಂಗಳೂರು:ಬಿಗ್ ಬಾಸ್ ಕನ್ನಡ ಸೀಸನ್ 12 ಪ್ರಾರಂಭವಾಗುತ್ತಿದ್ದಂತೆಯೇ ಪ್ರೇಕ್ಷಕರು ನಿರೀಕ್ಷಿಸದ ರೀತಿಯಲ್ಲಿ ಮೊದಲ ದಿನವೇ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ. ಕರಾವಳಿಯಿಂದ ಬಂದ ಯೂಟ್ಯೂಬರ್ ರಕ್ಷಿತಾ ಶೆಟ್ಟಿ ಕೇವಲ ಕೆಲವೇ ಗಂಟೆಗಳ ಕಾಲ ಮನೆಯೊಳಗೆ ಇದ್ದು, ಗೇಟ್ ಪಾಸ್ ಪಡೆದು ಹೊರಬಂದಿದ್ದಾರೆ.

ಶನಿವಾರ ಗ್ರ್ಯಾಂಡ್ ಎಂಟ್ರಿಯಲ್ಲಿ ಕಿಚ್ಚ ಸುದೀಪ್ 19 ಮಂದಿ ಸ್ಪರ್ಧಿಗಳನ್ನು ಪರಿಚಯಿಸಿದರು. ಈ ಬಾರಿ “ಒಂಟಿ ಮತ್ತು ಜಂಟಿ” ಎಂಬ ವಿಶೇಷ ಪರಿಕಲ್ಪನೆಯಡಿ ಕೆಲವರು ಒಂಟಿಯಾಗಿ ಹಾಗೂ ಕೆಲವರು ಜಂಟಿಯಾಗಿ ಮನೆಯಲ್ಲಿ ಪ್ರವೇಶಿಸಿದರು. ಆದರೆ, ಮನೆಯಲ್ಲಿ ಪ್ರವೇಶಿಸಿದ ಕೆಲವೇ ಹೊತ್ತಿನಲ್ಲಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಮೊದಲ ಶಾಕ್ ನೀಡಿದರು.
ಅತಂತ್ರ ಸ್ಥಿತಿಯಲ್ಲಿ ಮನೆಯಲ್ಲಿ ಪ್ರವೇಶಿಸಿದ ಮೂವರು ಸ್ಪರ್ಧಿಗಳಲ್ಲಿ (ರಕ್ಷಿತಾ ಶೆಟ್ಟಿ, ಮಾಳು ನಿಪನಾಳ ಹಾಗೂ ಸ್ಪಂದನಾ) ಒಬ್ಬರನ್ನು ಹೊರಗೆ ಕಳುಹಿಸುವಂತೆ ಬಿಗ್ ಬಾಸ್ ಆದೇಶಿಸಿದರು. ಈ ನಿರ್ಧಾರವನ್ನು 6 ಒಂಟಿ ಸ್ಪರ್ಧಿಗಳಿಗೆ ಹಸ್ತಾಂತರಿಸಲಾಯಿತು. ಎಲ್ಲರ ಮುಂದೆಯೂ ತಮಗೆ ಬಿಗ್ ಬಾಸ್ ವೇದಿಕೆ ಯಾಕೆ ಬೇಕು ಎಂಬುದನ್ನು ಹೇಳಿದ ಮೂವರಲ್ಲಿ ಬಹುತೇಕ ಮತಗಳು ರಕ್ಷಿತಾ ಶೆಟ್ಟಿಯ ವಿರುದ್ಧ ಬಿದ್ದವು. ಹೀಗಾಗಿ ಮೊದಲ ದಿನವೇ ರಕ್ಷಿತಾ ಶೆಟ್ಟಿ ಔಟ್ ಆದರು.
ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲೇ ಇದೇ ಮೊದಲು, ಮೊದಲ ದಿನವೇ ಒಬ್ಬ ಸ್ಪರ್ಧಿಯನ್ನು ಹೊರ ಕಳುಹಿಸುವ ಘಟನೆ ನಡೆದಿದೆ. ಇದುವರೆಗೆ ಕನಿಷ್ಠ ಒಂದು ವಾರವಾದರೂ ಸ್ಪರ್ಧಿಗಳು ಮನೆಯಲ್ಲಿ ಉಳಿಯುವ ಸಂಪ್ರದಾಯ ಇತ್ತು.
ರಕ್ಷಿತಾ ಶೆಟ್ಟಿ ಕನ್ನಡವನ್ನು ಸರಿಯಾಗಿ ಮಾತನಾಡಲು ಹಾಗೂ ಅರ್ಥಮಾಡಿಕೊಳ್ಳಲು ಕಷ್ಟಪಡುತ್ತಿದ್ದರು. ಹೀಗಾಗಿ ಆದೇಶಗಳನ್ನು ಪಾಲಿಸುವುದು ಮತ್ತು ಇತರರೊಂದಿಗೆ ಹೊಂದಿಕೊಳ್ಳುವುದು ಕಠಿಣವಾಗಬಹುದೆಂಬ ಕಾರಣಕ್ಕೂ ಅವರನ್ನು ಮೊದಲೇ ಔಟ್ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಒಂದು ದಿನಕ್ಕೆ ಎಲಿಮಿನೇಷನ್ ಮಾಡೋದಾಗಿದ್ರೆ ಏಕೆ ಆಯ್ಕೆ?
ರಕ್ಷಿತಾ ಶೆಟ್ಟಿಯ ಎಲಿಮಿನೇಷನ್ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಒಂದೇ ದಿನದಲ್ಲಿ ಎಲಿಮಿನೇಟ್ ಮಾಡುವುದು ನ್ಯಾಯವಲ್ಲ” ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದೇ ಮೊದಲ ದಿನದಿಂದಲೇ ಬಿಗ್ ಬಾಸ್ ಸೀಸನ್ 12 ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದ್ದು, ಮುಂದಿನ ದಿನಗಳಲ್ಲಿ ಇನ್ನೇನು ಟ್ವಿಸ್ಟ್ ನೀಡುತ್ತಾರೆ ಎಂಬ ನಿರೀಕ್ಷೆ ಮೂಡಿಸಿದೆ.

