ಬೆಂಗಳೂರು: ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ತನ್ನ ಉತ್ಪನ್ನಗಳ ಪ್ರಚಾರದ ಭಾಗವಾಗಿ ಹೊಂಬಾಳೆ ಫಿಲ್ಮ್ಸ್‌ನ ‘ಕಾಂತಾರಾ – ಚಾಪ್ಟರ್ 1’ ಚಿತ್ರದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ರಾಜ್ಯ ಮಾಲೀಕತ್ವದ ಸಂಸ್ಥೆಯಾದ ಕೆಎಸ್‌ಡಿಎಲ್, ‘ಕಾಂತಾರಾ – ಚಾಪ್ಟರ್ 1’ ಚಿತ್ರದ ಸುಗಂಧದ್ರವ್ಯ ಪಾಲುದಾರರಾಗಿ ಕರ್ನಾಟಕದ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ ಒಪ್ಪಂದ ಮಾಡಿಕೊಂಡಿದೆ. ಈ ಚಿತ್ರವನ್ನು ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ, ಇಂಗ್ಲಿಷ್ ಹಾಗೂ ಸ್ಪ್ಯಾನಿಷ್ ಸೇರಿ ಏಳು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಭಾರತದಲ್ಲಿ ಮಾತ್ರವೇ ಸುಮಾರು 7,000 ಪರದೆಗಳಲ್ಲಿ ಹಾಗೂ 30ಕ್ಕೂ ಹೆಚ್ಚು ದೇಶಗಳಲ್ಲಿ 6,500 ಕ್ಕೂ ಅಧಿಕ ಪರದೆಗಳಲ್ಲಿ ಬಿಡುಗಡೆಯಾಗಲಿದೆ.
ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ ಮಾತನಾಡಿ, “ಮೈಸೂರು ಸ್ಯಾಂಡಲ್ ಸೋಪ್ ಸಾಬೂನು ಮೂಲಕ ಪ್ರಸಿದ್ಧಿ ಪಡೆದಿರುವ ಕೆಎಸ್‌ಡಿಎಲ್ ಈಗ ‘ಕಾಂತಾರಾ’ ತಂಡದೊಂದಿಗೆ ಕೈಜೋಡಿಸಿದ್ದು ಸಂತೋಷದ ವಿಚಾರ. ಈ ಸಹಭಾಗಿತ್ವದ ಮೂಲಕ ಸಂಸ್ಥೆ ತನ್ನ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲಿದೆ” ಎಂದರು.
ಕೆಎಸ್‌ಡಿಎಲ್ ಅಧ್ಯಕ್ಷ ಅಪ್ಪಾಜಿ ನಾಡಗೌಡ ಕೂಡ “ಕಾಂತಾರಾ ಚಿತ್ರ ತಂಡದೊಂದಿಗೆ ಕೈಜೋಡಿಸುವ ಮೂಲಕ ಸಂಸ್ಥೆಯ ಉತ್ಪನ್ನಗಳು ಇನ್ನಷ್ಟು ಜನರಿಗೆ ತಲುಪಲಿವೆ” ಎಂದು ನಂಬಿಕೆ ವ್ಯಕ್ತಪಡಿಸಿದರು.

