ಭಾರತವು ಮಧ್ಯಮ ದೂರದ ಅಗ್ನಿ–ಪ್ರೈಮ್ ಕ್ಷಿಪಣಿಯನ್ನು ಮೊದಲ ಬಾರಿಗೆ ರೈಲು ಆಧಾರಿತ ವಿಶೇಷ ಮೊಬೈಲ್ ಲಾಂಚರ್ ವ್ಯವಸ್ಥೆಯಿಂದ ಯಶಸ್ವಿಯಾಗಿ ಉಡಾಯಿಸಿದೆ. 2,000 ಕಿಲೋಮೀಟರ್ ವ್ಯಾಪ್ತಿಯ ಈ ನೂತನ ತಲೆಮಾರಿನ ಕ್ಷಿಪಣಿಯಲ್ಲಿ ಹಲವಾರು ತಾಂತ್ರಿಕ ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.


ರೈಲು ಜಾಲದಲ್ಲಿ ಯಾವುದೇ ಪೂರ್ವ ತಯಾರಿಗಳಿಲ್ಲದೆ ಚಲಿಸುವ ಸಾಮರ್ಥ್ಯವಿರುವ ಈ ಮೊಬೈಲ್ ಲಾಂಚರ್‌ನಿಂದ ಕ್ಷಿಪಣಿ ಪ್ರಕ್ಷೇಪಣೆ ಸಾಧ್ಯವಾಗಿದ್ದು, ಅತಿ ಕಡಿಮೆ ಸಮಯದಲ್ಲಿ ಗುರಿ ಸಾಧನೆ ಹಾಗೂ ಕಡಿಮೆ ಪತ್ತೆಗೊಳ್ಳುವ ಸಾಮರ್ಥ್ಯವನ್ನು ನೀಡುತ್ತದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಯಶಸ್ವಿ ಪರೀಕ್ಷೆಗೆ ಸಂಬಂಧಿಸಿದಂತೆ ಡಿಆರ್‌ಡಿಒ, ಸ್ಟ್ರಾಟೆಜಿಕ್ ಫೋರ್ಸ್ ಕಮಾಂಡ್ ಹಾಗೂ ಸಶಸ್ತ್ರ ಪಡೆಗಳನ್ನು ಅಭಿನಂದಿಸಿದ್ದಾರೆ.
ಈ ಸಾಧನೆಯಿಂದ ಭಾರತವು ರೈಲು ಆಧಾರಿತ ಕ್ಯಾನಿಸ್ಟರೈಸ್‌ಡ್ ಲಾಂಚ್ ಸಿಸ್ಟಮ್ ಅಭಿವೃದ್ಧಿಪಡಿಸಿದ ಕೆಲವು ದೇಶಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಇದು ಭಾರತದ ರಕ್ಷಣಾ ತಂತ್ರಜ್ಞಾನ ಶಕ್ತಿಯನ್ನು ಮತ್ತಷ್ಟು ಬಲಪಡಿಸಿದೆ.

