ನವದೆಹಲಿ: ದೇಶದಾದ್ಯಂತ ಕಾಣೆಯಾಗುತ್ತಿರುವ ಮಕ್ಕಳ ಪತ್ತೆ ಕಾರ್ಯದಲ್ಲಿ ಸಮನ್ವಯದ ಕೊರತೆ ಕಂಡುಬಂದಿರುವ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರ್ಕಾರಕ್ಕೆ ಮಹತ್ವದ ಆದೇಶ ನೀಡಿದೆ.

ನ್ಯಾಯಮೂರ್ತಿಗಳು ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್‌ರನ್ನೊಳಗೊಂಡ ಪೀಠವು, ಕಾಣೆಯಾದ ಮಕ್ಕಳ ದೂರುಗಳನ್ನು ದಾಖಲಿಸಿ, ತನಿಖೆಯ ಪ್ರಗತಿ ಮತ್ತು ಮಾಹಿತಿ ಹಂಚಿಕೊಳ್ಳಲು ಸಮರ್ಪಿತ ಆನ್‌ಲೈನ್ ಪೋರ್ಟಲ್ ನಿರ್ಮಿಸಬೇಕು ಎಂದು ಕೇಂದ್ರಕ್ಕೆ ಸೂಚಿಸಿದೆ.
ಪ್ರತಿ ರಾಜ್ಯವು ಈ ಪೋರ್ಟಲ್ ಕಾರ್ಯನಿರ್ವಹಣೆಗೆ ನೋಡಲ್ ಅಧಿಕಾರಿಯನ್ನು ನೇಮಿಸಿ, ದೂರುಗಳ ಸ್ವೀಕೃತಿ ಹಾಗೂ ಮಾಹಿತಿ ಹಂಚಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಿರಬೇಕು ಎಂದು ಕೋರ್ಟ್ ತಿಳಿಸಿದೆ.
“ಮಕ್ಕಳ ಸುರಕ್ಷತೆ ಮತ್ತು ರಕ್ಷಣೆಯು ರಾಷ್ಟ್ರದ ಒಟ್ಟಾರೆ ಜವಾಬ್ದಾರಿಯಾಗಿದೆ. ಈ ದಿಸೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಡುವೆ ಹೊಂದಾಣಿಕೆ ಅತ್ಯಗತ್ಯ,” ಎಂದು ಪೀಠ ತೀರ್ಪಿನಲ್ಲಿ ತಿಳಿಸಿದೆ.
ಕೇಂದ್ರ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸೊಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು, ಈ ಕುರಿತು ಕೇಂದ್ರದಿಂದ ಅಗತ್ಯ ಸೂಚನೆಗಳನ್ನು ಪಡೆಯುವುದಾಗಿ ಕೋರ್ಟ್‌ಗೆ ಭರವಸೆ ನೀಡಿದ್ದಾರೆ.

