ಭಾರತದಲ್ಲಿ ಚಿನ್ನದ ಉತ್ಪಾದನೆಯಲ್ಲಿ ಮಹತ್ವದ ಹೆಜ್ಜೆ ಇಡಲಾಗುತ್ತಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ದೇಶದ ಮೊದಲ ದೊಡ್ಡ ಖಾಸಗಿ ಚಿನ್ನದ ಗಣಿ ಆರಂಭವಾಗುತ್ತಿದೆ.

ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಪ್ರಾರಂಭವಾಗಲಿರುವ ಈ ಗಣಿಯಿಂದ ವರ್ಷಕ್ಕೆ ಸುಮಾರು 750 ಕಿಲೊಗ್ರಾಂ ಚಿನ್ನ ಉತ್ಪಾದನೆ ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶೀಯ ಚಿನ್ನದ ಸಂಗ್ರಹವನ್ನು ಬಲಪಡಿಸುವುದರೊಂದಿಗೆ ಚಿನ್ನದ ಆಮದು ಅವಲಂಬನೆ ಕಡಿಮೆ ಮಾಡಲು ಈ ಯೋಜನೆ ನೆರವಾಗಲಿದೆ. ಪ್ರಸ್ತುತ ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಚಿನ್ನ ಆಮದುದಾರ ದೇಶವಾಗಿದ್ದು, ವರ್ಷಕ್ಕೆ ಸರಾಸರಿ 1,000 ಟನ್‌ಗಳಷ್ಟು ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದೆ.
ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದಲ್ಲಿ ಆರಂಭವಾಗುತ್ತಿರುವ ಖಾಸಗಿ ಚಿನ್ನದ ಗಣಿ ದೇಶದ ಆರ್ಥಿಕತೆಗೆ ದೊಡ್ಡ ಪೂರಕವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

